ವೀರಾಜಪೇಟೆ, ಮಾ. ೧೯: ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅವಧಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ವೀರಾಜಪೇಟೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ಉದ್ಘಾಟಿಸಿದರು. ಕೊಡಗು ಜಿಲ್ಲೆಯಲ್ಲಿ ಕನ್ನಡದ ಸಮರ್ಪಕ ಕೆಲಸಗಳಿಗೆ ದಿಕ್ಸೂಚಿ ತೋರಿದ ವ್ಯಕ್ತಿ ದಿವಂಗತ ಪದ್ಮನಾಭ ಅವರು ಕೊಡಗು ಜಿಲ್ಲೆಯಲ್ಲಿ ಕನ್ನಡ ಭಾಷೆಗೆ ಸ್ಥಾನಮಾನಗಳನ್ನು ತಂದುಕೊಟ್ಟ ವ್ಯಕ್ತಿ ಅವರು. ಅವರ ತಂದೆಯAತೆಯೇ ನೂತನ ಅಧ್ಯಕ್ಷ ರಾಜೇಶ್ ಪದ್ಮನಾಭರು ಕೂಡಾ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಈ ಗಡಿನಾಡಲ್ಲಿ ಭಾಷೆಕಟ್ಟುವ ಕೆಲಸವನ್ನು ಮಾಡಬೇಕಿದೆ ಎಂದರು.

ವೀರಾಜಪೇಟೆ ತಾಲೂಕು ಕ.ಸಾ.ಪ.ದ ನಿಕಟಪೂರ್ವ ಅಧ್ಯಕ್ಷ ಮಧೋಶ್ ಪೂವಯ್ಯ ಮಾತನಾಡಿ, ಕ.ಸಾ.ಪ.ದ ಪ್ರತಿ ಚಟುವಟಿಕೆಗಳಲ್ಲಿ ಸಂಪೂರ್ಣ ಸಹಕಾರವಿರುವಿದಾಗಿ ತಿಳಿಸಿದರು.

ಕ.ಸಾ.ಪ.ದ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಮಾತನಾಡಿ, ಬೆಳೆಸಿದವರನ್ನು ಮರೆಯುವ ಕಾಲಘಟ್ಟದಲ್ಲಿ ನಾವಿದ್ದೇವೆ. ಚುನಾವಣೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಯ್ಕೆಗಿರುವ ಒಂದು ಪ್ರಕ್ರಿಯೆ ಅಷ್ಟೇ. ಚುನಾವಣೆ ಬಳಿಕ ವಿಭಿನ್ನ ನಿಲುವುಗಳು, ಭಿನ್ನಮತ ಬರಬಾರದು ಎಲ್ಲರೂ ಒಟ್ಟಾಗಿ ಕ್ನನಡದ ತೇರನ್ನು ಎಳೆಯಲು ಮುಂದಾಗಬೇಕು ಎಂದರು.

ಬಳಿಕ ಮಾತನಾಡಿದ ವೀರಾಜ ಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ್, ೫೦ ಸೆಂಟ್ ಜಾಗವನ್ನು ಒಂದು ತಿಂಗಳೊಳಗಾಗಿ ಕನ್ನಡ ಭವನ ನಿರ್ಮಾಣಕ್ಕೆ ಮಂಜೂರು ಮಾಡಿಕೊಡುವುದಾಗಿ ತಿಳಿಸಿದರು. ಅಲ್ಲದೇ ವಿದ್ಯಾರ್ಥಿಗಳಿಗೆ ಸಾಹಿತ್ಯವನ್ನು ಜೊತೆಜೊತೆಗೆ ಸಾಹಿತಿಗಳನ್ನು ಪರಿಚಯಿಸುವ ಕೆಲಸ ಕ.ಸಾ.ಪ.ದ ಕಾರ್ಯಕ್ರಮಗಳ ಮೂಲಕ ಆಗಬೇಕು ಎಂದು ತಿಳಿಸಿದರು.

ಕ.ಸಾ.ಪ.ದ ಗೌರವ ಕಾರ್ಯದರ್ಶಿ ಮುನೀರ್ ಅಹಮ್ಮದ್ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಿ ಎನ್ನುವ ಕಿವಿಮಾತಿನ ಮೂಲಕ ನೂತನ ಆಡಳಿತ ಮಂಡಳಿಗೆ ಶುಭ ಹಾರೈಸಿದರು.

ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ವಿಠಲ್ ನಾಣಯ್ಯ ವೀರಾಜಪೇಟೆ ಗಡಿನಾಡು ಆಗಿರುವುದರಿಂದ ಎಲ್ಲಾ ಭಾಷಿಕರನ್ನು ಒಗ್ಗೂಡಿಸಿಕೊಂಡು ಕನ್ನಡದ ಕಾರ್ಯಕ್ರಮಗಳನ್ನು ಮಾಡಬೇಕು ಎಂದರು.

ವೀರಾಜಪೇಟೆ ತಾಲೂಕು ಕ.ಸಾ.ಪ.ದ ನೂತನ ಅಧ್ಯಕ್ಷ ರಾಜೇಶ್ ಪದ್ಮನಾಭ ತಮ್ಮ ಚಿಂತನೆ - ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಕೇಶವ ಕಾಮತ್ ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸಗಳನ್ನು ವಿದ್ಯಾರ್ಥಿ ಮಿತ್ರರ ಬಳಿ ತೆಗೆದುಕೊಂಡು ಹೋಗ ಬೇಕಾದರೆ ಹೆಚ್ಚೆಚ್ಚು ದತ್ತಿನಿಧಿಗಳು ಸ್ಥಾಪನೆಯಾಗಬೇಕು. ಆಗ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಾಯಕವಾಗುತ್ತದೆ. ಕನ್ನಡ ಎಲ್ಲರ ಅನ್ನದ ಭಾಷೆ, ಉದ್ಯೋಗದ ಭಾಷೆ ಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯ ನಾಲ್ಕು ತಾಲೂಕುಗಳ ನೂತನ ಕ.ಸಾಪ ಅಧ್ಯಕ್ಷರುಗಳಾದ ಸೋಮವಾರಪೇಟೆ ತಾಲೂಕು ಕ.ಸಾ.ಪ. ಅಧ್ಯಕ್ಷ ವಿಜೇತ್, ಕುಶಾಲನಗರ ತಾಲೂಕು ಕ.ಸಾ.ಪ ಅಧ್ಯಕ್ಷ ಕೆ.ಎಸ್. ಮೂರ್ತಿ, ಮಡಿಕೇರಿ ತಾಲೂಕು ಕ.ಸಾ.ಪ. ಅಧ್ಯಕ್ಷ ಅಂಬೇಕಲ್ ನವೀನ್, ಪೊನ್ನಂಪೇಟೆ ತಾಲೂಕು ಕ.ಸಾ.ಪ. ಅಧ್ಯಕ್ಷ ದಯಾ ಚಂಗಪ್ಪ, ವೀರಾಜಪೇಟೆ ತಾಲೂಕು ನೂತನ ಕ.ಸಾ.ಪ. ಅಧ್ಯಕ್ಷರಿಗೆ ಶುಭ ಹಾರೈಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್, ಕನ್ನಡ ಬಾವುಟವನ್ನು ನೂತನ ಅಧ್ಯಕ್ಷ ರಾಜೇಶ್ ಪದ್ಮನಾಭರಿಗೆ ಹಸ್ತಾಂತರಿಸುವ ಮೂಲಕ ಅಧಿಕಾರವನ್ನು ಹಸ್ತಾಂತರ ಮಾಡಿದರು.

ವೀರಾಜಪೇಟೆ ತಾಲೂಕು ಕ.ಸಾ.ಪ.ದ ನಿಕಟಪೂರ್ವ ಅಧ್ಯಕ್ಷ ಮದೋಶ್ ಪೂವಯ್ಯರನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ವೀರಾಜಪೇಟೆ ತಾಲೂಕು ನೂತನ ಕಸಾಪ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ವೇದಿಕೆಯಲ್ಲಿ, ಕ.ಸಾ.ಪ. ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಮಡಿಕೇರಿ ಕ.ಸಾ.ಪ ಗೌರವ ಕಾರ್ಯದರ್ಶಿ ಪ್ರತಿಮಾ ಹರೀಶ್ ರೈ, ಕೋಶಾಧಿಕಾರಿ ಎಂ. ಜೋಯಪ್ಪ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅನೀತಾ ರಾಜೇಶ್ ತಂಡದ ಸದಸ್ಯರು ನಾಡಗೀತೆ ಹಾಡಿದರು. ಪತ್ರಕರ್ತೆ ರಜಿತಾ ಕಾರ್ಯಪ್ಪ ನಾ ಕನ್ನಡಿಗ ಟಾಮಿ ಥೋಮಸ್ ಕಾರ್ಯಕ್ರಮ ನಿರೂಪಿಸಿದರು. ಸಾವಿತ್ರಿ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಸಾಹಿತ್ಯಾಭಿಮಾನಿಗಳು, ವಕೀಲರು, ಸಾರ್ವಜನಿಕರು ಹಾಜರಿದ್ದರು.