ಮಡಿಕೇರಿ, ಮಾ. ೧೯: ಮಲೆನಾಡು ಕೊಡಗು ಜಿಲ್ಲೆಗೆ ಇಲ್ಲಿಯವರೆಗೆ ಮಳೆಯಾಗದ ಕಾರಣ ಕೊಡಗು ರಕ್ಷಣಾ ವೇದಿಕೆ ಮಳೆಗಾಗಿ ಮಳೆ ದೇವರ ಮೊರೆ ಹೋಗಿದೆ.
ಕೊರವೇ ಅಧ್ಯಕ್ಷ ಪವನ್ ಪೆಮ್ಮಯ್ಯ ನೇತೃತ್ವದ ತಂಡ ಪಾಡಿಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿತು. ಕಾವೇರಿಯ ಉಗಮ ಸ್ಥಾನ ಕೊಡಗಿಗೆ ಉತ್ತಮ ಮಳೆಯಾಗಿ ಬೆಳೆ ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭ ಮಾತನಾಡಿದ ಪವನ್ ಪೆಮ್ಮಯ್ಯ ಪ್ರತಿವರ್ಷ ಮಾರ್ಚ್ ತಿಂಗಳಿನಲ್ಲಿ ನಿರೀಕ್ಷೆಯಂತೆ ಮಳೆಯಾಗಿ ಕೃಷಿಕ ವರ್ಗದಲ್ಲಿ ಹರ್ಷ ಮೂಡುತಿತ್ತು. ಆದರೆ ಪ್ರಸ್ತುತ ವರ್ಷ ಮಳೆ ಇಲ್ಲದೆ ಬೆಳೆಗಾರರು ಕಂಗೆಟ್ಟಿದ್ದಾರೆ. ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆತಂಕ ಮೂಡಿದೆ. ಆದ್ದರಿಂದ ಜಿಲ್ಲೆಯ ಎಲ್ಲಾ ದೇವಾಲಯ, ಚರ್ಚ್ ಮತ್ತು ಮಸೀದಿಗಳಲ್ಲಿ ಕೊರವೇ ಪದಾಧಿಕಾರಿಗಳು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದರು.
ವೇದಿಕೆ ನಿರ್ದೇಶಕ ಪಾಪು ರವಿ, ಮಡಿಕೇರಿ ನಗರಾಧ್ಯಕ್ಷÀ ಶರತ್, ಕಾರ್ಯಾಧ್ಯಕ್ಷ ಮಹೇಶ್ ಮತ್ತಿತರರು ಈ ಸಂದರ್ಭ ಹಾಜರಿದ್ದರು. ಜಿಲ್ಲೆಯ ವಿವಿಧೆಡೆ ಕೊರವೇ ಕಾರ್ಯಕರ್ತರು ಮಳೆಗಾಗಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.