ಸೋಮವಾರಪೇಟೆ, ಮಾ. ೧೮: ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ರಾಜ್ಯಮಟ್ಟದ ಸಾವಯವ ಕೃಷಿ ಹಾಗೂ ಕುಲ ಗೋವುಗಳ ಸಮ್ಮೇಳನ, ಗವ್ಯೋತ್ಪನ್ನಗಳ ಮಹತ್ವ, ಉತ್ಪಾದನೆಯ ಪ್ರಾತ್ಯಕ್ಷಿಕೆ, ಉತ್ತಮ ರಾಸುಗಳ ಪ್ರದರ್ಶನ ಸೇರಿದಂತೆ ವಿಚಾರ ಸಂಕಿರಣಕ್ಕೆ ಅಂಕನಹಳ್ಳಿ ಗ್ರಾಮದ ಮನೆಹಳ್ಳಿ ತಪೋಕ್ಷೇತ್ರ ಸಿದ್ಧಗೊಳ್ಳುತ್ತಿದ್ದು, ಮಠಾಧೀಶರಾದ ಶ್ರೀ ಸ್ವಾಮೀಜಿಗಳು ಗೋವುಗಳ ಉಳಿವು ಹಾಗೂ ಬೆಳವಣಿಗೆಗೆ ಕಂಕಣ ತೊಟ್ಟಿದ್ದಾರೆ.

ಇದೇ ಪ್ರಥಮವಾಗಿ ರಾಜ್ಯ ಮಾತ್ರವಲ್ಲದೇ ಅಂತರ್‌ರಾಜ್ಯದ ವಿಜ್ಞಾನಿಗಳು, ಸಾವಯವ ಕೃಷಿಕರು, ಸಾಧಕ ಹೈನುಗಾರಿಕಾ ಉದ್ಯಮಿಗಳು ಭಾಗವಹಿಸುತ್ತಿದ್ದು, ಸ್ಥಳೀಯ ತಳಿಯ ಗೋವುಗಳ ಮಹತ್ವ, ಗೋವಿನ ವಿವಿಧ ಬಗೆಯ ಉತ್ಪನ್ನಗಳ ಬಗ್ಗೆ ಸವಿಸ್ತಾರ ಮಾಹಿತಿ ಒದಗಿಸಲು ವೇದಿಕೆ ಸಿದ್ಧಗೊಳ್ಳುತ್ತಿದೆ. ಇದರೊಂದಿಗೆ ಹೈನುಗಾರರಿಗೆ ಒಂದೇ ಸೂರಿನಡಿ ಎಲ್ಲಾ ಮಾಹಿತಿ ಒದಗಿಸಲು ಪ್ರಯತ್ನ ಸಾಗಿದೆ.

ಸಮಾಜಮುಖಿ ಕಾರ್ಯಗಳ ಮೂಲಕ ಹೆಸರು ಮಾಡುತ್ತಿರುವ ಸೋಮವಾರಪೇಟೆ ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿರುವ ಮನೆಹಳ್ಳಿ ತಪೋಕ್ಷೇತ್ರದ ಶ್ರೀ ಮಹಾಂತ ಶಿವಲಿಂಗ ಮಹಾಸ್ವಾಮೀಜಿಗಳ ಅಭಿಲಾಷೆ, ಗೋ ಸಂತತಿಯ ಉಳಿವಿಗಾಗಿ ಚಿಂತಿಸುವ ಮನೋಭಿಲಾಷೆಯ ಮೂರ್ತರೂಪ ವಾಗಿ ಈ ಸಮ್ಮೇಳನದ ರೂಪುರೇಷೆ ಸಿದ್ಧಗೊಳ್ಳುತ್ತಿದ್ದು, ತಾ. ೨೩ ರಿಂದ ೨೫ ರವರೆಗೆ ಕೃಷಿ ಉಪಯೋಗಿ ಕಾರ್ಯಕ್ರಮಗಳು ಆಯೋಜನೆ ಗೊಂಡಿವೆ.

ಕಳೆದ ೧೦ ವರ್ಷಗಳ ಹಿಂದೆ ಮಠದಲ್ಲಿ ಗೋಶಾಲೆ ಸ್ಥಾಪಿಸುವ ಮೂಲಕ ಗೋವುಗಳ ರಕ್ಷಣೆಗೆ ಕ್ರಮ ಕೈಗೊಂಡಿರುವ ಸ್ವಾಮೀಜಿಗಳು, ಗೋ ಶಾಲೆಯ ದಶಮಾನೋತ್ಸವ ನಿಮಿತ್ತ ರಾಜ್ಯಮಟ್ಟದ ಸಾವಯವ ಕೃಷಿ ಮತ್ತು ಕುಲ ಗೋವುಗಳ ಸಮ್ಮೇಳನ, ಪಶು ವೈದ್ಯಕೀಯ ಶಿಬಿರ, ಸಾವಯವ ಕೃಷಿ ಮತ್ತು ಗವ್ಯೋತ್ಪನ್ನಗಳ ಮಹತ್ವ, ಉತ್ಪಾದನೆ ಕುರಿತು ಪ್ರಾತ್ಯಕ್ಷಿಕೆ, ಪ್ರಾದೇಶಿಕ ಕ್ರೀಡೆಗಳು, ಗೋ ಸಂಬAಧಿತ ವಿಚಾರ ಸಂಕಿರಣ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರಿಗೆ ಮಹತ್ವದ ಮಾಹಿತಿ ನೀಡಲು ಮುಂದಾಗಿದ್ದಾರೆ.

ಪಶು ವೈದ್ಯಕೀಯ ಶಿಬಿರ: ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಗೋ ಸಂತತಿ ಕ್ಷೀಣಿಸುತ್ತಿದ್ದು, ಹಲವಷ್ಟು ತಳಿಗಳು ಮಾಯವಾಗಿವೆ. ಗೋ ಪಾಲನೆಯಿಂದ ರೈತರು ಹಿಮ್ಮುಖರಾಗುತ್ತಿದ್ದು, ರೈತರ ಜೀವನಾಡಿಯಾಗಿದ್ದ ಗೋವುಗಳ ಸ್ಥಳಕ್ಕೆ ಯಂತ್ರೋಪಕರಣಗಳು ಲಗ್ಗೆ ಇಟ್ಟಿವೆ. ಹಾಲಿಗೆ ಬೇಡಿಕೆ ಇದ್ದರೂ ನಿರೀಕ್ಷೆಯಂತೆ ಉತ್ಪಾದನೆಯಾಗುತ್ತಿಲ್ಲ. ಈ ನಡುವೆ ಗೋವುಗಳಿಗೆ ವಿವಿಧ ಖಾಯಿಲೆಗಳು ಬಾಧಿಸುತ್ತಿದ್ದು, ರೈತರ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ. ಇದನ್ನು ಮನಗಂಡ ಶ್ರೀಮಠವು ತಾ. ೨೩ ರಂದು ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೧ ಗಂಟೆಯವರೆಗೆ ಉಚಿತ ಪಶು ವೈದ್ಯಕೀಯ ಶಿಬಿರ ಆಯೋಜಿಸಿದೆ.

ಎಲ್ಲಾ ರೀತಿಯ ಪಶುಗಳಿಗೂ ಉಚಿತ ಆರೋಗ್ಯ ತಪಾಸಣೆ ಹಾಗೂ ಅಗತ್ಯ ಔಷಧಿಗಳನ್ನು ನೀಡುವ ಕಾರ್ಯಕ್ಕೆ ಶ್ರೀಮಠವು ಮುಂದಾಗಿದೆ.

ಕಾರ್ಯಾಗಾರ: ಗೋವಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ್ದರೂ ಅದನ್ನು ಉತ್ಪಾದಿಸುವ ಕ್ರಮಗಳ ಬಗ್ಗೆ ಹಲವಷ್ಟು ಮಂದಿಗೆ ತಿಳಿದಿಲ್ಲ. ಈ ನಿಟ್ಟಿನಲ್ಲಿ ತಾ. ೨೪ ರಂದು ಬೆಳಿಗ್ಗೆ ೯ ಗಂಟೆಯಿAದ ಮಧ್ಯಾಹ್ನ ೧೨.೩೦ ರವರೆಗೆ ಸಾವಯವ ಕೃಷಿ ಮತ್ತು ಗವ್ಯೋತ್ಪನ್ನಗಳ ಮಹತ್ವ, ಅವುಗಳನ್ನು ಉತ್ಪಾದಿಸುವ ವಿಧಾನದ ಕುರಿತು ತಜ್ಞರಿಂದ, ಸಾವಯವ ಕೃಷಿಕರಿಂದ ರೈತರಿಗೆ ಮಾಹಿತಿ ಒದಗಿಸುವ ಕಾರ್ಯಾಗಾರ ನಡೆಯಲಿದೆ.

ಗ್ರಾಮೀಣ ಕ್ರೀಡೆ: ಗ್ರಾಮೀಣ ಭಾಗದಲ್ಲಿ ಸಾಮರಸ್ಯ ವೃದ್ಧಿಸುವಲ್ಲಿ ಸ್ಥಳೀಯ ಕ್ರೀಡೆಗಳು ಮಹತ್ತರ ಪಾತ್ರ ವಹಿಸಿದ್ದು, ಕೃಷಿಯೊಂದಿಗೆ ಕ್ರೀಡೆಯೂ ಅವಿನಾಭಾವ ಸಂಬAಧ ಹೊಂದಿದೆ. ಈ ಹಿಂದೆ ಗ್ರಾಮದ ರೈತರೆಲ್ಲರೂ ಒಬ್ಬರಿಗೊಬ್ಬರು ಕೃಷಿ ಕಾರ್ಯದಲ್ಲಿ ಸಹಾಯ ಮಾಡುತ್ತಿದ್ದರು. ‘ಮುಯ್ಯಾಳು’ ಮಾದರಿಯಲ್ಲಿ ಸಹಕಾರ ನೀಡುತ್ತಾ ಬಾಂಧವ್ಯವನ್ನೂ ವೃದ್ಧಿಸಿಕೊಳ್ಳುತ್ತಿದ್ದರು. ಇದರೊಂದಿಗೆ ತಮ್ಮ ತಮ್ಮಲ್ಲೇ ಸ್ಪರ್ಧೆಗಳನ್ನು ಆಯೋಜಿಸಿ ಸಂಭ್ರಮಿಸುತ್ತಿದ್ದರು.

ಇದನ್ನು ಮನಗಂಡಿರುವ ಸ್ವಾಮೀಜಿಗಳು, ಪ್ರಾದೇಶಿಕ ಕ್ರೀಡೆಗಳ ಮೂಲಕ ಮತ್ತೊಮ್ಮೆ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಅಂದು ಮಧ್ಯಾಹ್ನ ೧ ಗಂಟೆಯ ನಂತರ ಪ್ರಾದೇಶಿಕ ಕ್ರೀಡೆಗಳು, ಮಹಿಳೆಯರಿಗೆ ರೊಟ್ಟಿ ಮಾಡುವ ಸ್ಪರ್ಧೆ, ರಂಗೋಲಿ ಸ್ಪರ್ಧೆ ಸೇರಿದಂತೆ ಇತರ ಸ್ಥಳೀಯ ಕ್ರೀಡೆಗಳನ್ನು ಆಯೋಜಿಸಿದ್ದಾರೆ.

ಕುಲಗೋವುಗಳ ಉತ್ಸವ: ದೇಶೀಯ ತಳಿಗಳು ಮಾಯ ವಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಅವುಗಳನ್ನು ಉಳಿಸುವ, ಪಾಲಕರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಾ. ೨೫ ರಂದು ಬೆಳಿಗ್ಗೆ ೮ ಗಂಟೆಯಿAದ ೯.೩೦ರವರೆಗೆ ಕುಲ ಗೋವುಗಳ ಸಾಂಪ್ರದಾಯಿಕ ಉತ್ಸವ ಆಯೋಜಿಸಲಾಗಿದೆ. ಬೆಳಿಗ್ಗೆ ೧೦ ಗಂಟೆಗೆ ಕುಲಗೋವುಗಳಾದ ಹಳ್ಳಿಕಾರ್ ಹಾಗೂ ಮಲೆನಾಡುಗಿಡ್ಡ ಗೋವುಗಳ ಪ್ರದರ್ಶನ, ಸಾವಯವ ಕೃಷಿ ಮಳಿಗೆಗಳ ಉದ್ಘಾಟನೆ ನಡೆಯಲಿದೆ.

ಅಧಿವೇಶನ: ಗೋವುಗಳ ಪಾಲನೆ, ಪೋಷಣೆ, ಲಾಭದಾಯಕ ಹೈನುಗಾರಿಕೆಯ ಬಗ್ಗೆ ಸವಿಸ್ತಾರ ಮಾಹಿತಿ, ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಕೃಷಿಕರಿಗೆ ಅರಿವು, ಹೈನುಗಾರಿಕೆಯ ಮಹತ್ವ, ಗೋ ಪಾಲಕರ ಸಮಸ್ಯೆಗಳು, ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಅಂದು ಬೆಳಿಗ್ಗೆ ೧೦ ರಿಂದ ೧ ಗಂಟೆಯವರೆಗೆ ಅಧಿವೇಶನ ನಡೆಯಲಿದ್ದು, ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ನೆರವೇರಲಿದೆ.

ಇದೇ ವೇದಿಕೆಯಲ್ಲಿ ಪ್ರಾದೇಶಿಕ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಹಾಗೂ ಉತ್ತಮ ರಾಸುಗಳ ಮಾಲೀಕರಿಗೆ ಬಹುಮಾನ ನೀಡಲಾಗುವುದು. ಉತ್ತಮ ರಾಸುಗಳಿಗೆ ಪ್ರಥಮ ೧೨ ಸಾವಿರ, ದ್ವಿತೀಯ ೧೧, ತೃತೀಯ ೧೦ ಸಾವಿರ ನಗದು ಬಹುಮಾನ ನೀಡಲಾಗುವುದು. ಇದರೊಂದಿಗೆ ಸಮಾಧಾನಕರ ಬಹುಮಾನ ನೀಡುವ ಮೂಲಕ ಗೋ ಪಾಲಕರನ್ನು ಪ್ರೋತ್ಸಾಹಿಸುವ ಕಾರ್ಯ ನಡೆಯಲಿದೆ.

ಸ್ವಾಮೀಜಿಗಳ ಮನೋಭಿಲಾಷೆಯ ಕಾರ್ಯಕ್ಕೆ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿದ್ದು, ಸಂಬAಧಪಟ್ಟ ಇಲಾಖೆಗಳೂ ಸಹಯೋಗ ವಹಿಸಿವೆ. ಒಟ್ಟಾರೆ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಒಂದೇ ವೇದಿಕೆಯಡಿ ರಾಜ್ಯಮಟ್ಟದ ಸಾವಯವ ಕೃಷಿ, ಕುಲಗೋವುಗಳ ಸಮ್ಮೇಳನ ಆಯೋಜನೆಗೊಂಡಿದ್ದು, ಇದು ಗೋ ಪಾಲಕರು, ಸಾವಯವ ಕೃಷಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿರೀಕ್ಷೆ ಯನ್ನು ಹುಟ್ಟು ಹಾಕಿದೆ.

- ವಿಜಯ್ ಹಾನಗಲ್