ಮಡಿಕೇರಿ, ಮಾ. ೧೯: "ಆತ್ಮ ಸಂಯಮ ಎಂಬುದು ಕಲಿಕೆಯಿಂದ ಬರುವ ವಿದ್ಯೆಯಲ್ಲ, ಕರಗತ ಮಾಡಿಕೊಳ್ಳಬೇಕಾದ ಕಲೆ" ತೋರಿಕೆಗಾಗಿ ಆತ್ಮ ಸಂಯಮಿಗಳಾಗಬೇಡಿ. ಶಿಸ್ತಿನ ಬದುಕಿನಿಂದ ಆತ್ಮ ಸಂಯಮ ಸಾಧಿಸಿ. ಕೆಲಸ ಚಿಕ್ಕದಿರಲಿ ದೊಡ್ಡದಿರಲಿ, ಶಿಸ್ತಿನಿಂದ ಮಾಡಿದಾಗ ಮಾತ್ರ ನಿರೀಕ್ಷಿತ ಫಲ ಸಿಗಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಬಾಲ್ಯದಿಂದಲೇ ಪ್ರತಿಯೊಂದು ಕಾರ್ಯಗಳನ್ನು ಶಿಸ್ತಿನಿಂದ ಮಾಡುತ್ತಾ ಮುನ್ನಡೆಯಬೇಕು ಎಂದು ಎನ್.ಸಿ.ಸಿ. ೧೯ ಕರ್ನಾಟಕ ಬೆಟಾಲಿಯನ್‌ನ ಕಮಾಂಡಿAಗ್ ಆಫೀಸರ್ ಕರ್ನಲ್ ಚೇತನ್ ಧೀಮಾನ್ ಅಭಿಪ್ರಾಯಪಟ್ಟರು.

ಮಡಿಕೇರಿ ನಗರದ ಸಂತ ಜೋಸೆಫರ ಕಾಲೇಜಿನಲ್ಲಿ ನೂತನವಾಗಿ ಆರಂಭಗೊAಡ ಎನ್.ಸಿ.ಸಿ. ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಎನ್.ಸಿ.ಸಿ.ಯಲ್ಲಿ ರಾಜ್ಯ ಪ್ರಶಸ್ತಿ ವಿಜೇತ ವಿಶಾಲ್ ಸಿ.ಪಿ., ವಿದ್ಯಾರ್ಥಿಗಳು ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಬೆಳೆಯಬೇಕು ಎಂದು ಸ್ಪೂರ್ತಿಯ ಮಾತುಗಳನ್ನು ಹೇಳಿದರಲ್ಲದೇ, ಎನ್.ಸಿ.ಸಿ. ಶಿಬಿರಗಳ ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂತ ಜೋಸೆಫರ ವಿದ್ಯಾಸಂಸ್ಥೆಗಳ ಸಂಚಾಲಕಿ ಸಿಸ್ಟರ್ ಅಂಥೋಣಿಯಮ್ಮ, ಮಕ್ಕಳು ಎನ್.ಸಿ.ಸಿ.ಯ ಸಮವಸ್ತçವನ್ನು ಧರಿಸಿದರೆ ಸಾಲದು, ಸಮತಾಭವವನ್ನು ಕೂಡಾ ಬೆಳೆಸಿಕೊಳ್ಳಬೇಕು. ಎನ್.ಸಿ.ಸಿ.ಯ ಉಡುಗೆತೊಡುಗೆಗಳಿಗೆ ಅದರದ್ದೇ ಆದ ಘನತೆ ಗೌರವಗಳಿವೆ. ಅದಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.

ಕಾಲೇಜಿನಲ್ಲಿ ಎನ್.ಸಿ.ಸಿ. ಘಟಕದ ಆರಂಭಕ್ಕೆ ಮುನ್ನುಡಿ ಬರೆದ ಸಂಸ್ಥೆಯ ಪ್ರಾಚಾರ್ಯ ಸಿಸ್ಟರ್ ಅಲೆಕ್ಸ್ ರಾಣಿ ದೇಶ ಕಟ್ಟುವ ಕಾಯಕಲ್ಪಕ್ಕೆ ನಾಂದಿ ಹಾಡಿದ ಎಲ್ಲರಿಗೂ ಶುಭ ಕೋರಿದರು.

ಕಾಲೇಜಿನ ಎನ್.ಸಿ.ಸಿ. ಘಟಕದ ಜವಬ್ದಾರಿಯನ್ನು ಉಪನ್ಯಾಸಕ ಅಭಿಲಾಶ್ ಕೆ.ಎಂ. ವಹಿಸಿಕೊಂಡರು. ಅನನ್ಯ ಎಂ.ಹೆಚ್. ನಿರೂಪಿಸಿ, ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕಿ ಆರುಷಿ ಅಯ್ಯಪ್ಪ ಸ್ವಾಗತಿಸಿ, ವಿದ್ಯಾರ್ಥಿ ಗೌತಮ್ ಎಂ.ಪಿ. ವಂದಿಸಿದರು. ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿಯರ ದೇಶಭಕ್ತಿ ಗೀತಗಾಯನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿತು.