ಶನಿವಾರಸಂತೆ, ಮಾ. ೧೯: ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ೨೦೨೨-೨೩ನೇ ಸಾಲಿನ ವಿವಿಧ ಆದಾಯ ಮೂಲದ ಹರಾಜು ಟೆಂಡರನ್ನು ತಾ. ೧೦ ರಂದು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಟೆಂಡರ್‌ದಾರರ ಸಮ್ಮುಖದಲ್ಲಿ ತೆರೆಯಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷೆ ಸರೋಜ ಶೇಖರ್ ವಹಿಸಿದ್ದು, ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಪಂಚಾಯಿತಿಗೆ ರೂ. ೫೦೪೧೦೦ ಲಕ್ಷ ಅಧಿಕ ಲಾಭ ಬಂದಿದೆ.

ಕಳೆದ ಸಾಲಿನಲ್ಲಿ ಸಂತೆ ಸುಂಕ ಎತ್ತಾವಳಿ ಟೆಂಡರ್ ಹರಾಜಿನಲ್ಲಿ ರೂ.೪.೯೦ ಲಕ್ಷಕ್ಕೆ ಹರಾಜಾಗಿದ್ದು, ಈ ಸಾಲಿನಲ್ಲಿ ರೂ. ೭೫೧೦೦೦ ಲಕ್ಷಕ್ಕೆ ಹರಾಜಾಗಿದ್ದು, ಪಂಚಾಯಿತಿಗೆ ರೂ. ೨೬೧೦೦೦ ಅಧಿಕ ಲಾಭ ಬಂದಿರುತ್ತದೆ. ಕಳೆದ ಸಾಲಿನಲ್ಲಿ ಹಸಿಮೀನು ಮಾರುಕಟ್ಟೆ ರೂ ೨೯೦೦೦೦ ಟೆಂಡರ್ ಹರಾಜಿನಲ್ಲಿ ಹರಾಜಾಗಿದ್ದು, ಈ ಸಾಲಿನಲ್ಲಿ ರೂ೫,೨೬,೧೦೦ ಲಕ್ಷಕ್ಕೆ ಹರಾಜಾಗಿದ್ದು, ಪಂಚಾಯಿತಿಗೆ ರೂ. ೨,೩೬,೧೦೦ ಅಧಿಕ ಲಾಭ ಬಂದಿದೆ.

ಬಸ್ ನಿಲ್ದಾಣ ಶುಲ್ಕ ಟೆಂಡರ್, ಕಳೆದ ಸಾಲಿನಲ್ಲಿ ರೂ. ೪೫,೦೦೦ ಸಾವಿರಕ್ಕೆ ಹರಾಜಾಗಿದ್ದು, ಈ ಸಾಲಿನಲ್ಲಿ ರೂ. ೫೨,೦೦೦ ಸಾವಿರಕ್ಕೆ ಹರಾಜಾಗಿದ್ದು, ಪಂಚಾಯಿತಿಗೆ ರೂ. ೭೦೦೦ ಸಾವಿರ ಅಧಿಕ ಲಾಭ ಬಂದಿದೆ. ಕುರಿ ಮಾಂಸ ಮಾರುಕಟ್ಟೆ ರೂ. ೬೦,೦೦೦ ಸಾವಿರಕ್ಕೆ ೨೦೨೨-೨೩ನೇ ಸಾಲಿಗೆ ಪರವಾನಿಗೆ ನೀಡಲಾಯಿತು.

ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಎಸ್.ಆರ್. ಮಧು, ಪಂಚಾಯಿತಿ ಸದಸ್ಯರುಗಳಾದ ಎಸ್.ಸಿ. ಶರತ್‌ಶೇಖರ್, ಎಸ್.ಎನ್. ರಘು, ಸರ್ದಾರ್ ಅಹ್ಮದ್, ಆದಿತ್ಯಗೌಡ, ಫರ್ಜಾನಾ ಶಾಹಿದ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ ಕಾರ್ಯದರ್ಶಿ ತಮ್ಮಯ್ಯಾಚಾರ್, ಸಿಬ್ಬಂದಿಗಳಾದ ವಸಂತ್, ಸವಿತಾ, ಫೌಜೀಯಾ, ಲೀಲಾ ಉಪಸ್ಥಿತರಿದ್ದು, ಟೆಂಡರ್ ಹರಾಜಿನಲ್ಲಿ ಪಂಚಾಯಿತಿಗೆ ಅಧಿಕ ಲಾಭ ಬಂದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇದಪ್ಪ ಸ್ವಾಗತಿಸಿ, ಸಿಬ್ಬಂದಿ ವಸಂತ್ ವಂದಿಸಿದರು.