ವೀರಾಜಪೇಟೆ, ಮಾ. ೧೮: ಮಲೆತಿರಿಕೆ ಬೆಟ್ಟದ ಶ್ರೀ ಮಲೆ ಮಹಾದೇಶ್ವರ ದೇವಾಲಯದ ವಾರ್ಷಿಕ ಉತ್ಸವದ ಅಂಗವಾಗಿ ಇಂದು ಪೇಟೆಯ ಮೆರವಣಿಗೆಯು ಸಾಂಪ್ರದಾಯಿಕವಾಗಿ ನೆರವೇರಿತು. ಮಲೆ ಮಹಾದೇಶ್ವರನಿಗೆ ವಾರ್ಷಿಕ ಉತ್ಸವವು ತಾ. ೧೫ ರಂದು ಆರಂಭವಾಗಿ ತಾ. ೨೦ ರಂದು ಹಲವು ಧಾರ್ಮಿಕ ಪೂಜಾ ಕೈಂಕರ್ಯಗಳು ಒಳಗೊಂಡು ಕೊನೆಗೊಳ್ಳಲಿದೆ.
ವಾರ್ಷಿಕ ಉತ್ಸವದ ಅಂಗವಾಗಿ ಇಂದು ಪೇಟೆ ಮೆರವಣಿಗೆಯು ದೇವಾಲಯದಿಂದ ಹೊರಟು ತೆಲುಗರ ಬೀದಿ, ಜೈನರಬೀದಿ, ಮುಖ್ಯ ರಸ್ತೆಗಾಗಿ ದೇವಾಂಗ ಬೀದಿಯಲ್ಲಿರುವ ಶ್ರೀ ಮಹಾಲಕ್ಷಿö್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ದೇವಾಲಯಕ್ಕೆ ಹಿಂದಿರುಗುವುದು ವಾಡಿಕೆಯಾಗಿದೆ.
ಶ್ರೀ ದೇವರ ಪ್ರಭಾವಳಿಯನ್ನು ಹೊತ್ತ ಪುರೋಹಿತರು ದೇವರ ನರ್ತನದೊಂದಿಗೆ ಚಂಡೆ ಮದ್ದಳೆ, ಕೊಡಗಿನ ಸಾಂಪ್ರದಾಯಿಕ ವಾಲಗವು ದೇವರಿಗೆ ಮೆರೆಗು ನೀಡಿದವು. ಪೇಟೆಯ ನಿವಾಸಿಗಳು ಶ್ರೀ ದೇವರಿಗೆ ಪೂಜೆ ಸಲ್ಲಿಸಿದರು. ನಗರದ ಜೈನರಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಮತ್ತು ದೇವಾಂಗ ಬೀದಿಯಲ್ಲಿರುವ ಶ್ರೀ ಮಹಾಲಕ್ಷಿö್ಮ ದೇವಾಲಯದಲ್ಲಿ ಶ್ರೀ ಮಲೆ ಮಹಾದೇಶ್ವರ ಸ್ವಾಮಿಗೆ ವಿಶೇಷ ಪೂಜೆಗಳು ನಡೆಯಿತು. - ಕಿಶೋರ್ ಕುಮಾರ್ ಶೆಟ್ಟಿ