ಪ್ರತಿ ವರ್ಷ ಮಾರ್ಚ್ ೨೦ ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ. ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳನ್ನು ರಕ್ಷಣೆ ಮಾಡುವ ಸಲುವಾಗಿ ೨೦೧೦ ರಿಂದ ಪ್ರತಿವರ್ಷ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತಿದೆ. ಗುಬ್ಬಚ್ಚಿ ಸೇರಿದಂತೆ ಪಕ್ಷಿ ಸಂಕುಲ ಸಂರಕ್ಷಣೆಯೊAದಿಗೆ ಇಡೀ ಜೀವ - ಸಂಕುಲ ಸಂರಕ್ಷಣೆಗಾಗಿ ಗುಬ್ಬಚ್ಚಿ ದಿನಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ.

ಪರಿಸರದ ಒಂದು ಭಾಗ ಮನುಷ್ಯ. ಆದರೆ ಮನುಷ್ಯ ಮಿತಿಮೀರಿ ಪರಿಸರ ತನ್ನ ಆಸ್ತಿ ಎಂದು ಅದನ್ನು ಬಳಸುತ್ತಾ ಬಂದಿರುವವನಲ್ಲದೇ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದ್ದಾನೆ.

ಪ್ರತಿ ಪಕ್ಷಿ ಸೇರಿದಂತೆ ವನ್ಯಜೀವಿ ಜೀವ ಸಂಕುಲಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪರಿಸರ ಮತ್ತು ಪಕ್ಷಿ ಸಂಕುಲ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಮಳೆ ತರುವಲ್ಲಿ ಹಾಗೂ ಮಳೆ ನೀರು ಇಂಗಿಸಲು ಅರಣ್ಯಗಳು ಎಷ್ಟು ಮುಖ್ಯವೋ, ಹಾಗೆಯೇ ಅರಣ್ಯ ವೃದ್ಧಿಯಲ್ಲಿ ಪಕ್ಷಿ ಸಂಕುಲ ಪ್ರಮುಖ ಪಾತ್ರ ವಹಿಸುತ್ತವೆ. ಪಕ್ಷಿ ಸಂಕುಲಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.

ಗುಬ್ಬಚ್ಚಿಗಳು ಮಾನವರ ನಿಕಟ ಸಂಬAಧಿ. ಮೊದಲು ಗುಬ್ಬಚ್ಚಿಗಳಿಲ್ಲದ ಮನೆ ಇಲ್ಲ ಎಂಬ ಮಾತು ಕೆಲವು ದಶಕಗಳ ಹಿಂದಿನವರೆಗೂ ಚಾಲ್ತಿಯಲ್ಲಿತ್ತು. ಪ್ರತಿ ಮನೆಯಂಗಳದಲ್ಲಿ, ಹಳ್ಳಿ, ಪಟ್ಟಣವೆನ್ನದೆ ಎಲ್ಲ ಬೀದಿಯ ಅಂಗಡಿಗಳ ಮುಂಭಾಗದಲ್ಲಿ ಗುಬ್ಬಚ್ಚಿಗಳ ಚಿಂವ್ ಚಿಂವ್ ಚಿಲಿಪಿಲಿ ಸದ್ದು ಕೇಳುತ್ತಲೇ ಇತ್ತು. ಮನೆಯಂಗಳದಲ್ಲಿ ಹಾರಾಡಿಕೊಂಡು ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾ ಮನೆಯ ಸದಸ್ಯರಂತೆಯೇ ನಮ್ಮೊಂದಿಗೆ ಚಿಂವ್ ಗುಟ್ಟುತ್ತಿದ್ದ ಗುಬ್ಬಚ್ಚಿಗಳ ಚಿಲಿಪಿಲಿ ಇಂದು ವಿರಳವಾಗುತ್ತಿದೆ. ಆದ್ದರಿಂದ, ನಾವು ವಾಸಿಸುವ ಸ್ಥಳದ ಸುತ್ತಮುತ್ತ ಮರಗಳನ್ನು ಬೆಳೆಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬೆಳೆದಿರುವ ಮರಗಳ ರೆಂಬೆಗಳಿಗೆ ನೀರು ತುಂಬಿದ ಮಡಿಕೆಗಳನ್ನು ನೇತು ಹಾಕುವುದು, ತಾರಸಿಗಳ ಮೇಲೆ ನೀರು ತುಂಬಿದ ಮಡಿಕೆಗಳನ್ನು ಇಡುವ ಮೂಲಕ ಬೇಸಿಗೆಯಲ್ಲಿ ಅವುಗಳಿಗೆ ದಣಿವಾರಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು.

ಇಂದು ನಮ್ಮಿಂದ ಗುಬ್ಬಚ್ಚಿಗಳು ಕ್ಷೀಣಿಸಲು ಹಲವಾರು ವೈಜ್ಞಾನಿಕ ಕಾರಣಗಳಿವೆ. ಒಂದು ಕಾಲದಲ್ಲಿ ಪಟ್ಟಣ-ನಗರದಲ್ಲಿ ಮಾತ್ರ ಕಾಣುತ್ತಿದ್ದ ಕಾಂಕ್ರೀಟ್ ಕಟ್ಟಡಗಳ ನಿರ್ಮಾಣ ಇಂದು ನಮ್ಮ ಹಳ್ಳಿಗಳಿಗೂ ವ್ಯಾಪಿಸಿವೆ. ಹಳ್ಳಿಗಳಲ್ಲಿ ಹೆಂಚಿನ ಮನೆಯ ಸೂರು ಹಾಗೂ ಮಾಡಿಗೆ ಮನೆಯ ಪ್ರಾಂಗಣದಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟಿಕೊಂಡು ಸಂಸಾರ ನಡೆಸುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ನಾವು ಆಧುನಿಕತೆಗೆ ತಕ್ಕಂತೆ ನೂತನ ವಿನ್ಯಾಸದಿಂದ ಕಾಂಕ್ರೀಟ್ ಮನೆ ನಿರ್ಮಾಣ ಮಾಡುತ್ತಿರುವುದರಿಂದ ಗುಬ್ಬಚ್ಚಿಗಳಿಗೆ ಗೂಡು ಕಟ್ಟಿಕೊಳ್ಳಲು ಪೂರಕ ಪರಿಸರವಿಲ್ಲದಿರುವುದು ಕೂಡ ಇವುಗಳ ಸಂತತಿ ಕ್ಷೀಣಿಸಲು ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಮೊಬೈಲ್ ದೂರವಾಣಿಯ ರೇಡಿಯೇಷನ್‌ನಿಂದಾಗಿ ಹಾಗೂ ಲೆಡೆಡ್ ಪೆಟ್ರೋಲ್ ನೇರವಾಗಿ ಗುಬ್ಬಚ್ಚಿ ಸಂತಾನೋತ್ಪತ್ತಿ ಮೇಲೆ ಪ್ರಭಾವ ಬೀರುತ್ತಿದೆ. ಬೇಸಿಗೆ ಕಾಲದಲ್ಲಿ ನಾವು ನಮ್ಮ ಮನೆ ಮುಂದೆ ಬಟ್ಟಲುಗಳಲ್ಲಿ ಶುದ್ಧ ನೀರು, ಕಾಳು ಹಾಗೂ ಉಳಿಕೆಯ ಆಹಾರ ಪದಾರ್ಥಗಳನ್ನಿಟ್ಟು ಗುಬ್ಬಚ್ಚಿಗಳ ಜೀವ ಸಂಕುಲವನ್ನು ಉಳಿಸಬೇಕು. ತಾರಸಿ ಮನೆಗಳ ಮೇಲೂ ಗೂಡುಗಳ ಮಾದರಿಯಲ್ಲಿ ಗೂಡು ಹಾಗೂ ನೀರನ್ನು ಇಟ್ಟು ಅವುಗಳ ಸಂರಕ್ಷಣೆಗೆ ಮುಂದಾಗಬೇಕು. ಈ ಗುಬ್ಬಚ್ಚಿಗಳ ಸಂರಕ್ಷಣೆ ಕುರಿತು ರಜಾವಧಿಯಲ್ಲಿ ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ಮೂಲಕ ಅವರು ತಮ್ಮನ್ನು ಪಕ್ಷಿ ಸಂಕುಲ ಸಂರಕ್ಷಣೆಗೆ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು.

ಪಕ್ಷಿಗಳ ವೈವಿಧ್ಯ ಕಡಿಮೆ ಆಗುತ್ತಿವೆ. ಅಂದರೆ ಇದು ಮುಂದೆ ಮನುಷ್ಯನ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಬಗ್ಗೆ ಚಿಂತಿಸಿ ಪಕ್ಷಿ ಸಂಕುಲವನ್ನು ಸಂರಕ್ಷಿಸಬೇಕಿದೆ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂಬುದನ್ನು ನಾವು ಅರಿಯಬೇಕು.

- ಟಿ.ಜಿ. ಪ್ರೇಮಕುಮಾರ್,

ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕೂಡುಮಂಗಳೂರು. ಮೊ. ೯೪೪೮೫ ೮೮೩೫೨