ರಾಜ್ಯಕ್ಕೆ ಬರಲಿದೆ ನವೀನ್ ಮೃತದೇಹ

ಬೆಂಗಳೂರು, ಮಾ. ೧೮: ಉಕ್ರೇನ್ ಖಾರ್ಕಿವ್‌ನಲ್ಲಿ ಮಾರ್ಚ್ ೧ ರಂದು ರಷ್ಯಾ ನಡೆಸಿದ ಶೆಲ್ ದಾಳಿಗೆ ಬಲಿಯಾದ ನವೀನ್ ಎಸ್.ಜಿ. ಅವರ ಮೃತದೇಹ ಭಾನುವಾರ ಬೆಂಗಳೂರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಅವರ ಪಾರ್ಥಿವ ಶರೀರ ಭಾನುವಾರ ಮುಂಜಾನೆ ೩ ಗಂಟೆ ಸುಮಾರಿಗೆ ಬೆಂಗಳೂರಿಗೆ ಆಗಮಿಸಲಿದೆ ಎಂದು ಸಿಎಂ ಬೊಮ್ಮಾಯಿ ಅವರು ಇಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ ನವೀನ್ ಅವರು ಖಾರ್ಕಿವ್ ನಗರದಲ್ಲಿ ಸ್ವಲ್ಪ ಆಹಾರ, ನೀರು ಮತ್ತು ಹಣವನ್ನು ವಿನಿಮಯ ಮಾಡಿಕೊಳ್ಳಲು ತನ್ನ ಬಂಕರ್‌ನಿAದ ಹೊರಬಂದಾಗ ರಷ್ಯಾ ನಡೆಸಿದ ಶೆಲ್ ದಾಳಿಗೆ ಬಲಿಯಾಗಿದ್ದರು. ಸೋಮವಾರ ಸಂಜೆ ಹಾವೇರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಹದಗೆಟ್ಟ ಚೀನಾದ ಪರಿಸ್ಥಿತಿ

ಬೀಜಿಂಗ್, ಮಾ. ೧೮: ಕೊರೊನಾದಿಂದಾಗಿ ಚೀನಾದಲ್ಲಿ ಮತ್ತೆ ಪರಿಸ್ಥಿತಿ ಹದಗೆಟ್ಟಿದ್ದು, ಇಲ್ಲಿನ ಸದ್ಯದ ಪರಿಸ್ಥಿತಿ ೨೦೨೦ಕ್ಕಿಂತ ಕೆಟ್ಟದಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಚೀನಾ ಗುಣಮುಖ ರೋಗಿಗಳ ಕ್ವಾರಂಟೈನ್ ಅವಧಿಯನ್ನು ಕಡಿತ ಮಾಡಿ ನೂತನ ಮಾರ್ಗಸೂಚಿ ಹೊರಡಿಸಿದೆ. ಚೀನಾದಲ್ಲಿನ ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ಅನೇಕ ಭಾಗಗಳಲ್ಲಿ ವೈದ್ಯಕೀಯ ಸಾಮಗ್ರಿಗಳ ಕೊರತೆ ಉಂಟಾಗಿದೆ. ಮುಂಬರುವ ವಾರಗಳಲ್ಲಿ ಚೀನಾದ ಆರೋಗ್ಯ ಸೇವೆಗಳ ಮೇಲಿನ ಒತ್ತಡ ಇನ್ನಷ್ಟು ಹೆಚ್ಚಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಕಳೆದ ೧೦ ವಾರಗಳಲ್ಲಿ ಚೀನಾದಲ್ಲಿ ೧೪೦೦೦ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿವೆ. ಒಮೈಕ್ರಾನ್‌ನಿಂದಾಗಿ ಪ್ರಕರಣಗಳ ವೇಗ ಹೆಚ್ಚಾಗುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಚೀನಾ ಅನೇಕ ನಗರಗಳಲ್ಲಿ ಲಾಕ್‌ಡೌನ್‌ಅನ್ನು ವಿಧಿಸಬೇಕಾಗಿದೆ. ಇದು ಚೀನಾದ ಆರ್ಥಿಕತೆಯ ಮೇಲೂ ಪರಿಣಾಮ ಬೀರಬಹುದೆಂಬ ಆತಂಕ ಎದುರಾಗಿದೆ. ಇನ್ನು ಕೋವಿಡ್‌ನಿಂದ ಗುಣಮುಖರಾದವರ ಕ್ವಾರಂಟೈನ್ ಅವಧಿಯನ್ನು ಚೀನಾ ಆರೋಗ್ಯ ಇಲಾಖೆ ಕಡಿತ ಮಾಡಿದ್ದು, ಇದರಿಂದ ಗಂಭೀರ ರೋಗಿಗಳಿಗೆ ಆಸ್ಪತ್ರೆ ಬೆಡ್ ಒದಗಿಸಲು ಮತ್ತು ವೈದ್ಯರ ಮೇಲಿನ ಒತ್ತಡ ತಗ್ಗಿಸಲು ನೆರವಾಗುತ್ತದೆ ಎಂದು ಹೇಳಲಾಗಿದೆ.

ಸೋನಿಯರನ್ನು ಭೇಟಿಯಾದ ಗುಲಾಮ್ ನಬಿ ಆಜಾದ್

ನವದೆಹಲಿ, ಮಾ. ೧೮: ಪಕ್ಷ ಪುನರ್ ರಚನೆ ಕ್ರಮ ಕುರಿತಂತೆ ಭಿನ್ನಮತೀಯ ಸದಸ್ಯರ ಸಭೆ ಬೆನ್ನಲ್ಲೇ, ಕಾಂಗ್ರೆಸ್ ಜಿ-೨೩ ಮುಖಂಡ ಗುಲಾಮ್ ನಬಿ ಆಜಾದ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದರು. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರನ್ನೊಳಗೊಂಡ ಸಾಮೂಹಿಕ ನಾಯಕತ್ವಕ್ಕೆ ಜಿ-೨೩ ಮುಖಂಡರು ಧ್ವನಿ ಎತ್ತಿದ ನಂತರ ಅದರ ಸದಸ್ಯರಲ್ಲಿ ಒಬ್ಬರಾದ ಭೂಪೇಂದ್ರ ಸಿಂಗ್ ಹೂಡಾ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ, ಭಿನ್ನಮತೀಯ ಸದಸ್ಯರ ಪ್ರಮುಖ ಬೇಡಿಕೆಯಾದ ಪಕ್ಷ ಪುನರ್ ರಚನೆ ಕುರಿತಂತೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಸೋನಿಯಾ-ಆಜಾದ್ ಭೇಟಿ ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಕ್ಷ ಸೋತ ನಂತರ ನಾಯಕತ್ವದ ಬದಲಾವಣೆ ವಿಚಾರ ಹೆಚ್ಚಾಗುತ್ತಿದ್ದಂತೆ ಗಾಂಧಿ ಕುಟುಂಬ ಜಿ-೨೩ ಮುಖಂಡರ ಮನವೊಲಿಸಲು ಮುಂದಾಗಿರುವುದAತೆ ಕಂಡುಬರುತ್ತಿದೆ.

ಢಾಕಾದಲ್ಲಿ ದೇವಾಲಯಗಳ ಧ್ವಂಸ

ಢಾಕಾ, ಮಾ. ೧೮: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿನ ಇಸ್ಕಾನ್ ರಾಧಾಕಾಂತ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿದೆ. ಢಾಕಾದಲ್ಲಿನ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಬಾಂಗ್ಲಾದೇಶಿ ಹಿಂದೂಗಳ ಧ್ವನಿ ಸಂಘಟನೆಯು ದಾಳಿಯ ದೃಶ್ಯಗಳನ್ನು ಹಂಚಿಕೊAಡಿದೆ ಮತ್ತು ಸಹಾಯಕ್ಕಾಗಿ ಮನವಿ ಮಾಡಿದೆ. ಇಸ್ಕಾನ್ ದೇವಾಲಯದ ಮೇಲೆ ಉಗ್ರಗಾಮಿಗಳು ಮತ್ತೆ ದಾಳಿ ಮಾಡುತ್ತಿದ್ದಾರೆ. ದೇವಾಲಯವನ್ನು ರಕ್ಷಿಸುವಲ್ಲಿ ಎಲ್ಲಾ ಹಿಂದೂಗಳು ತಮ್ಮ ಪಾತ್ರವನ್ನು ವಹಿಸಬೇಕೆಂದು ನಾವು ವಿನಂತಿಸುತ್ತಿದ್ದೇವೆ ಎಂದು ಬಾಂಗ್ಲಾದೇಶದ ಹಿಂದೂ ಸಮೂದಾಯಗಳು ಟ್ವೀಟ್‌ನಲ್ಲಿ ತಿಳಿಸಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಬಾಂಗ್ಲಾದೇಶದಲ್ಲಿನ ಹಿಂದೂ ದೇವಾಲಯಗಳ ಮೇಲೆ ಸರಣಿ ದಾಳಿ ನಡೆದಿತ್ತು. ಕೆಲವು ತಿಂಗಳ ನಂತರ ಮತ್ತೆ ಇದೀಗ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಯುತ್ತಿದೆ.

ರಷ್ಯಾದ ದಾಳಿಗೆ ಎಲ್ಡಿವ್ ನಗರ ನಾಶ

ಎಲ್ವಿವ್, ಮಾ. ೧೮: ಉಕ್ರೇನ್‌ನ ಎಲ್ವಿವ್ ನಗರದಲ್ಲಿನ ವಿಮಾನ ದುರಸ್ತಿ ಘಟಕವನ್ನು ರಷ್ಯಾದ ಕ್ಷಿಪಣಿಗಳು ಶುಕ್ರವಾರ ನಾಶಪಡಿಸಿರುವುದಾಗಿ ಮೇಯರ್ ಉಕ್ರೇನ್‌ನ ಮಾಧ್ಯಮವೊಂದು ವರದಿ ಮಾಡಿದೆ. ಈ ಮಧ್ಯ, ನಿನ್ನೆ ದಿನ ರಷ್ಯಾದ ೧೪ ವೈಮಾನಿಕ ಘಟಕಗಳನ್ನು ನಾಶಪಡಿಸಿರುವುದಾಗಿ ಉಕ್ರೇನ್ ವಾಯುಪಡೆ ಹೇಳಿಕೊಂಡಿದೆ. ರಷ್ಯಾದ ಏಳು ವಿಮಾನಗಳು, ಒಂದು ಹೆಲಿಕಾಫ್ಟರ್, ಮೂರು ಯುಎವಿ ಮತ್ತಿತರ ಮೂರು ಕ್ರೂಸ್ ಕ್ಷಿಪಣಿಗಳನ್ನು ಉಕ್ರೇನ್ ವಾಯು ರಕ್ಷಣಾ ವ್ಯವಸ್ಥೆಯಿಂದ ನಾಶಪಡಿಸಲಾಗಿದೆ ಎಂದು ಉಕ್ರೇನ್ ವಾಯುಪಡೆ ಕಮಾಂಡ್ ತಿಳಿಸಿದೆ. ಉಕ್ರೇನ್‌ನಲ್ಲಿನ ಮಿಲಿಟರಿ ಕಾರ್ಯಾಚರಣೆಯಿಂದಾಗಿ ಅಮೆರಿಕ ಮತ್ತಿತರ ಪಾಶ್ಚಿಮಾತ್ಯ ರಾಷ್ಟçಗಳ ನಂತರ ಜಪಾನ್ ಕೂಡಾ ರಷ್ಯಾದ ಮೇಲೆ ನಿರ್ಬಂಧ ವಿಧಿಸಿದೆ ಎಂದು ಜಪಾನ್ ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.

ಹಿಜಾಬ್ ಪರ ಗೋಡೆ ಬರಹ

ಉಡುಪಿ, ಮಾ. ೧೮: ಹಿಜಾಬ್ ಪರವಾಗಿ ಮಲ್ಪೆ ಸಮೀಪದ ಬೈಲಕೆರೆ ಎಂಬಲ್ಲಿ ಕೆಲ ಕಿಡಿಗೇಡಿಗಳು ಗೋಡೆ ಬರಹ ಬರೆದಿರುವುದು ಪತ್ತೆಯಾಗಿದೆ. ನ್ಯಾಯಾಲಯ ಹಿಜಾಬ್ ವಿರುದ್ಧ ಆದೇಶ ನೀಡಿದ ಬೆನ್ನಲ್ಲೇ ಮಲ್ಪೆ ಸಮೀಪದ ಬೈಲಕೆರೆ ಎಂಬಲ್ಲಿ ಕಟ್ಟಡವೊಂದರ ಗೋಡೆಯಲ್ಲಿ ಹಿಜಾಬ್ ಪರವಾಗಿ ಗೋಡೆ ಬರಹ ಪತ್ತೆಯಾಗಿದೆ. ಹಿಜಾಬ್ ಮೂವ್‌ಮೆಂಟ್, ಹಿಜಾಬ್ ಇಸ್ ರೈಟ್, ಹಿಜಾಬ್ ಇಸ್ ಡಿಗ್ನಿಟಿ’ ಎಂಬ ಸಾಲುಗಳನ್ನು ಬರೆಯಲಾಗಿದೆ. ಈ ಕುರಿತು ಮಾಹಿತಿ ತಿಳಿದು ಬರುತ್ತಿದ್ದಂತೆಯೇ ಸ್ಥಳಕ್ಕೆ ನೂರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿದರು. ಈ ವೇಳೆ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿರುವವರನ್ನು ಬಂಧಿಸುವAತೆ ಆಗ್ರಹಿಸಿದರು. ಸ್ಥಳಕ್ಕೆ ಕೂಡಲೇ ಭೇಟಿ ನೀಡಿದ ವೃತ್ತ ನಿರೀಕ್ಷಕ ಶರಣಬಸವ ಪಾಟೀಲ್ ಹಾಗೂ ಮಲ್ಪೆ ಠಾಣಾಧಿಕಾರಿ ಸಕ್ತಿವೇಲು ಪರಿಸ್ಥಿತಿ ತಿಳಿಗೊಳಿಸಿದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ ದಿನಗಳ ಹಿಂದೆ ಬಳ್ಳಾರಿ ಹೊಸಪೇಟೆಯಲ್ಲಿನ ಜಿಲ್ಲಾ ಕ್ರೀಡಾಂಗಣ ಸೇರಿದಂತೆ ಪದವಿ ಕಾಲೇಜುಗಳ ಎದುರು ಹಿಜಾಬ್ ಪರವಾದ ಗೋಡೆ ಬರಹಗಳು ಪತ್ತೆಯಾಗಿತ್ತು.

ಬಿಎಸ್‌ಎಫ್‌ನ ಶಿಬಿರದಲ್ಲಿ ಮೂರು ಮಕ್ಕಳ ಸಾವು

ಧಲೈ, ಮಾ. ೧೮: ಧಲೈ ಜಿಲ್ಲೆಯ ಜವಾಹರ್ ನಗರದಲ್ಲಿರುವ ೧೩೮ ಬೆಟಾಲಿಯನ್ ಬಿಎಸ್‌ಎಫ್‌ನ ಶಿಬಿರದಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದ ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಮೃತರನ್ನು ಅಶ್ಮಾನ್ ಕುಮಾರ್ (೧೩), ಪ್ರಬಲ್ ತಿವಾರಿ (೧೨) ಮತ್ತು ಅಜಿತ್ ಜಗತಾಪ್ (೧೬) ಎಂದು ಗುರುತಿಸಲಾಗಿದ್ದು, ಅವರ ತಂದೆ ಪ್ರಸ್ತುತ ಬಿಎಸ್‌ಎಫ್ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ, ವರದಿಯ ಪ್ರಕಾರ, ಬೆಳಿಗ್ಗೆ ೧೧ ಗಂಟೆಗೆ ಶಿಬಿರದೊಳಗೆ ಘಟನೆ ಸಂಭವಿಸಿದೆ ಆದರೆ ಮೂರು ಗಂಟೆಗಳ ನಂತರ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಆಸ್ಪತ್ರೆಯ ಅಧಿಕಾರಿಗಳು ತಿಳಿಸುವವರೆಗೂ ಈ ವಿಷಯವನ್ನು ಪೊಲೀಸರಿಗೆ ತಿಳಿಸಲಾಗಿಲ್ಲ. ಘಟನೆಯ ಬಗ್ಗೆ ತಮಗೆ ತಿಳಿದಿಲ್ಲ, ಮೃತ ದೇಹಗಳ ಬಗ್ಗೆ ಆಸ್ಪತ್ರೆಯಿಂದ ಕರೆ ಬಂದಿದೆ ಮತ್ತು ತನಿಖೆ ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೂವರು ಮಕ್ಕಳು ಸ್ನಾನ ಮಾಡಲು ಸಮೀಪದ ಹೊಳೆಗೆ ಹೋಗಿ ನದಿಯಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರು ಮೃತಪಟ್ಟಿದ್ದಾರೆ. ಹೋಳಿ ಆಚರಣೆ ವೇಳೆ ಮಕ್ಕಳು ವಿಷಕಾರಿ ಅಥವಾ ಪ್ರತಿಕ್ರಿಯಾತ್ಮಕ ಪದಾರ್ಥಗಳನ್ನು ಸೇವಿಸಿರಬಹುದು ಎಂದು ಕೂಡ ಶಂಕಿಸಲಾಗಿದೆ.