ಶನಿವಾರಸಂತೆ, ಮಾ. ೧೮: ದುಂಡಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮ ಕಿರಣ್ ವಹಿಸಿದ್ದರು.
ಸಭೆಯಲ್ಲಿ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು. ದುಂಡಳ್ಳಿ ಗ್ರಾಮದಲ್ಲಿರುವ ಆರೋಗ್ಯ ಕೇಂದ್ರದ ಸಮಸ್ಯೆಯನ್ನು ಸರಿಪಡಿಸುವಂತೆ, ಗ್ರಾಮದಲ್ಲಿ ಕುಡಿಯುವ ನೀರಿನ ಬಗ್ಗೆ ಹ್ಯಾಂಡ್ ಪಂಪ್ಗಳನ್ನು ದುರಸ್ತಿಪಡಿಸುವಂತೆ, ರಸ್ತೆ, ಚರಂಡಿಗಳ ದುರಸ್ತಿಯ ಬಗ್ಗೆ ಗಮನ ಸೆಳೆಯಲಾಯಿತು.
ಗ್ರಾಮ ಪಂಚಾಯಿತಿಯಲ್ಲಿ ಸ್ಥಾಯಿ ಸಮಿತಿ, ಉತ್ಪಾದನಾ ಸಮಿತಿ ಹಾಗೂ ಇತರ ಸಮಿತಿಗಳ ಸಭೆ ಕರೆದಿಲ್ಲ ಎಂಬ ಆರೋಪಗಳು ಕೇಳಿಬಂದವು. ಪಂಚಾಯಿತಿ ಮಳಿಗೆಗಳ ಬಾಡಿಗೆ ಬಾಕಿ ಇರುವುದರಿಂದ ಪೊಲೀಸ್ ಭದ್ರತೆ ಮುಖಾಂತರ ವಸೂಲಿ ಮಾಡುವಂತೆ, ಬಾಡಿಗೆ ಕಟ್ಟದಿದ್ದ ಅಂಗಡಿ ಮಳಿಗೆಗಳಿಗೆ ಬೀಗ ಹಾಕುವಂತೆ ಸದಸ್ಯರು ಒತ್ತಾಯಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಎಸ್.ಸಿ. ನಿತಿನ್, ಸದಸ್ಯರುಗಳಾದ ಡಿ.ಪಿ. ಬೋಜಪ್ಪ, ಎಂ.ಡಿ. ದೇವರಾಜ್, ಸಿ.ಜೆ. ಗಿರೀಶ್, ಬಿ.ಎಸ್. ಮಹಂತೇಶ್, ಎಸ್.ಸಿ. ಕಾಂತರಾಜ್, ಎಸ್.ಸಿ. ಭಾಗ್ಯ, ಕೆ.ಎಸ್. ಜಾನಕಿ, ನಂದಿನಿ ನಾಗರತ್ನ, ಪಿ.ಹೆಚ್. ಗೋಪಿಕಾ, ಸತ್ಯವತಿ, ಹೆಚ್.ಆರ್. ಭವಾನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಕೆ. ರಾಜೇಂದ್ರ, ಕಾರ್ಯದರ್ಶಿ ವೇಣುಗೋಪಾಲ್ ಉಪಸ್ಥಿತರಿದ್ದರು.