‘ಶಕ್ತಿ’ ವರದಿ ಪ್ರಸ್ತಾಪ

ಮಡಿಕೇರಿ, ಮಾ. ೧೮: ಕೊಡಗಿನಲ್ಲಿ ಬೆಳೆಗಾರರಿಗೆ ೧೦ ಹೆಚ್.ಪಿ. ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡುವ ಬೇಡಿಕೆಯ ಕುರಿತಾಗಿ ವಿಧಾನಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರು ಪ್ರಶ್ನಿಸಿದ್ದಾರೆ. ನಿನ್ನೆ ಶೂನ್ಯವೇಳೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಅವರು ಈ ಬೇಡಿಕೆ ಇನ್ನೂ ಈಡೇರದಿರುವ ಬಗ್ಗೆ ಹಾಗೂ ವಾಸ್ತವ ವಿಚಾರಗಳ ಕುರಿತಾಗಿ ತಾ. ೧೦ ರ ‘ಶಕ್ತಿ’ಯಲ್ಲಿ ಪ್ರಕಟವಾಗಿದ್ದ ವಿವರ ಮಾಹಿತಿಯನ್ನು ವಿವರಿಸಿ ಸದನದಲ್ಲಿ ಗಮನ ಸೆಳೆದರು.

ಬೇರೆ ಜಿಲ್ಲೆ ಹಾಗೂ ಕೊಡಗಿನಲ್ಲಿ ಇರುವ ವ್ಯತ್ಯಾಸ ಹಾಗೂ ಉಚಿತ ವಿದ್ಯುತ್‌ನ ಅವಶ್ಯಕತೆ ಕುರಿತಾಗಿ ಸುಜಾ ಕುಶಾಲಪ್ಪ ಮಾತನಾಡಿದರು. ಇದಕ್ಕೆ ಸರಕಾರದಿಂದ ಇನ್ನಷ್ಟೇ ಉತ್ತರ ಸಿಗಬೇಕಿದೆ. ಬಜೆಟ್ ಕುರಿತು ಮುಖ್ಯಮಂತ್ರಿಗಳು ಸದ್ಯದಲ್ಲಿ ನೀಡಲಿರುವ ಉತ್ತರಗಳಲ್ಲಿ ಈ ವಿಚಾರ ಬರುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಈ ನಡುವೆ ಉಚಿತ ವಿದ್ಯುತ್ ಬೇಡಿಕೆ ಕುರಿತಾಗಿ ಸುಜಾ ಹಾಗೂ ಶಾಸಕ ಅಪ್ಪಚ್ಚುರಂಜನ್ ಅವರು ಸರಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೂ ಪ್ರತ್ಯೇಕ ಮಾತುಕತೆ ನಡೆಸಿದ್ದು, ಕ್ರಮಕ್ಕೆ ಮನವಿ ಮಾಡಿದ್ದಾರೆ.