ಸೋಮವಾರಪೇಟೆ, ಮಾ.೧೮: ಸಮೀಪದ ತೋಳೂರುಶೆಟ್ಟಳ್ಳಿ, ಕೂತಿ, ಎಡದಂಟೆ, ದೊಡ್ಡತೋಳೂರು ಸೇರಿದಂತೆ ಸುತ್ತಮುತ್ತಲ ಸಾವಿರಾರು ಕುಟುಂಬಗಳಿಗೆ ಪ್ರತಿ ಮಳೆಗಾಲದಲ್ಲಿ ಸಮಸ್ಯೆ ತಂದೊಡ್ಡುತ್ತಿದ್ದ ವಿದ್ಯುತ್ ಅಭಾವವನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮಸ್ಥರೇ ಕ್ರಮಕ್ಕೆ ಮುಂದಾಗಿದ್ದು, ೪೦೦ಕ್ಕೂ ಅಧಿಕ ಮಂದಿ ಶ್ರಮದಾನದಲ್ಲಿ ಭಾಗಿಯಾಗುವ ಮೂಲಕ ಹೊಸ ವಿದ್ಯುತ್ ಮಾರ್ಗ ಪಡೆಯಲು ಮುಂದಾಗಿದ್ದಾರೆ.
ತೋಳೂರುಶೆಟ್ಟಳ್ಳಿ, ಕೂತಿ, ದೊಡ್ಡತೋಳೂರು ಭಾಗಕ್ಕೆ ಹೊಸಬೀಡು ಗ್ರಾಮದಿಂದ ಕಂಬಳ್ಳಿ ಮಾರ್ಗವಾಗಿ ಈವರೆಗೆ ವಿದ್ಯುತ್ ಸರಬರಾಜು ಆಗುತ್ತಿತ್ತು. ಈ ಪ್ರದೇಶದಲ್ಲಿರುವ ಅರಣ್ಯ, ದಟ್ಟಕಾಡು, ಕಾಫಿ ತೋಟದ ನಡುವೆ ವಿದ್ಯುತ್ ತಂತಿಗಳು ಹಾದು ಹೋಗಿದ್ದರಿಂದ ಪ್ರತಿ ಮಳೆಗಾಲದಲ್ಲಿ ಕನಿಷ್ಟ ಒಂದು ತಿಂಗಳಾದರೂ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳುತ್ತಿತ್ತು.
ಕಳೆದ ಅನೇಕ ದಶಕಗಳಿಂದ ಕಂಬಳ್ಳಿ ಮಾರ್ಗವಾಗಿ ವಿದ್ಯುತ್ ಬರುತ್ತಿದ್ದ ಹಿನ್ನೆಲೆ ಮಳೆಗಾಲದಲ್ಲಿ ಮರಗಳು ಲೈನ್ ತಂತಿಗಳ ಮೇಲೆ ವಿದ್ಯುತ್ ಸ್ಥಗಿತಗೊಳ್ಳುತಿತ್ತು. ಬಳಸು ಮಾರ್ಗದಲ್ಲಿ ಲೈನ್ ಎಳೆದಿದ್ದರಿಂದ ಮಳೆಗಾಲದಲ್ಲಿ ಸಮಸ್ಯೆ ಕಂಡು ಹಿಡಿಯುವುದು ಕಷ್ಟಸಾಧ್ಯವಾಗಿತ್ತು.
ಇದರಿಂದಾಗಿ ತಿಂಗಳುಗಳ ಕಾಲ ಈ ವ್ಯಾಪ್ತಿಯ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳುತಿತ್ತು. ಈ ಹಿನ್ನೆಲೆ ಕಂಬಳ್ಳಿ ಮೂಲಕ ಹಾದುಹೋಗಿರುವ ವಿದ್ಯುತ್ ಮಾರ್ಗವನ್ನು ಹೊಸಬೀಡು ಮಾರ್ಗವಾಗಿ ತೋಳೂರುಶೆಟ್ಟಳ್ಳಿ, ಕೂತಿ ಗ್ರಾಮಗಳಿಗೆ ಅಳವಡಿಸುವಂತೆ ಗ್ರಾಮಸ್ಥರು ಸಂಸದರು, ಶಾಸಕರು, ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ಅನೇಕ ವರ್ಷಗಳಿಂದ ಮನವಿ ನೀಡುತ್ತಲೇ ಬಂದಿದ್ದರು.
ಕೂತಿ ಗ್ರಾಮಸ್ಥರಂತೂ ಗ್ರಾ.ಪಂ. ಚುನಾವಣೆಯನ್ನೂ ಬಹಿಷ್ಕರಿಸಿದ್ದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಸಾವಿರಾರು ಅಂಚೆಚೀಟಿ ಅಭಿಯಾನ ನಡೆಸಿ ಎಲ್ಲರ ಗಮನ ಸೆಳೆಯಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಗ್ರಾಮಸ್ಥರೇ ಸೇರಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಿದ್ದು, ಗ್ರಾಮ ಪಂಚಾಯಿತಿಯಿAದ ೮ ಲಕ್ಷ ಹಣವನ್ನು ಇಲಾಖೆಗೆ ನೀಡಿ, ಹೊಸ ಮಾರ್ಗವಾಗಿ ವಿದ್ಯುತ್ ಪಡೆದುಕೊಳ್ಳಲು ಮುಂದಾಗಿದ್ದಾರೆ.
ಈಗಾಗಲೇ ಕಾಮಗಾರಿಯ ಗುತ್ತಿಗೆ ನೀಡಿದ್ದು, ಹೊಸಬೀಡಿನಿಂದ ತೋಳೂರುಶೆಟ್ಟಳ್ಳಿಯವರೆಗೆ ೩ ಕಿ.ಮೀ. ಅಂತರದಲ್ಲಿ ೫೨ ಕಂಬಗಳನ್ನು ಅಳವಡಿಸಲಾಗುತ್ತಿದೆ. ಹೊಸಬೀಡಿನಲ್ಲಿರುವ ಟ್ರಾನ್ಸ್ಫಾರ್ಮರ್ನಿಂದ ಮುಖ್ಯರಸ್ತೆಯ ಪಕ್ಕದಲ್ಲಿಯೇ ಕಂಬಗಳ ಮೂಲಕ ತಂತಿ ಎಳೆದು ತೋಳೂರುಶೆಟ್ಟಳ್ಳಿಯ ಟ್ರಾನ್ಸ್ಫಾರ್ಮರ್ಗೆ ಸಂಪರ್ಕ ಕಲ್ಪಿಸಲು ಕ್ರಿಯಾಯೋಜನೆ ತಯಾರಿಸಲಾಗಿದೆ.
ನೂತನ ಮಾರ್ಗ ಹಾದುಹೋಗುವ ಎರಡೂ ಕಡೆಗಳಲ್ಲಿರುವ ಕಾಫಿ ತೋಟದಲ್ಲಿ ಬೆಳೆದಿದ್ದ ಮರಗಳನ್ನು ಗ್ರಾಮಸ್ಥರೇ ಶ್ರಮದಾನದ ಮೂಲಕ ತೆರವುಗೊಳಿಸಿದ್ದಾರೆ. ಸುಮಾರು ೪೦೦ಕ್ಕೂ ಅಧಿಕ ಮಂದಿ ಗ್ರಾಮಸ್ಥರು ಶ್ರಮದಾನದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಕೂತಿ ಗ್ರಾಮಾಧ್ಯಕ್ಷ ಮೋಹನ್, ತೋಳೂರುಶೆಟ್ಟಳ್ಳಿ ಗ್ರಾಮಾಧ್ಯಕ್ಷ ರಾಜಗೋಪಾಲ್, ದೊಡ್ಡತೋಳೂರು ಗ್ರಾಮಾಧ್ಯಕ್ಷ ಕೃಷ್ಣಪ್ಪ ಸೇರಿದಂತೆ ಗ್ರಾ. ಪಂ. ಅಧ್ಯಕ್ಷ ಶೇಖರ್, ಸದಸ್ಯರು ಉಪಸ್ಥಿತರಿದ್ದರು.