ಮಡಿಕೇರಿ, ಮಾ. ೧೭: ಪ್ರಸ್ತುತದ ಸನ್ನಿವೇಶದಲ್ಲಿ ಮನುಷ್ಯರು ೧೦೦ ವರ್ಷ ಬಾಳಿ-ಬದುಕುವುದು ಅಪರೂಪವೆನ್ನಬಹುದು. ಸಾರ್ಥಕ ೧೦೦ ವರ್ಷದ ಜೀವನವನ್ನು ಪೂರೈಸುವುದು ಎಂದರೆ ಅದೊಂದು ದೇವರ ಕೃಪೆ. ಎರಡನೆಯ ಮಹಾಯುದ್ಧದಲ್ಲಿ ಪಾಲ್ಗೊಂಡು ದೇಶಸೇವೆಗೈದಿರುವ ಕೊಡಗಿನ ಹಿರಿಯ ಜೀವ. ಇವರು ಮೂಲತ: ಪಾರಾಣೆಯವರಾದ ಪ್ರಸ್ತುತ ಮಡಿಕೇರಿಯ ಹೊಸ ಬಡಾವಣೆಯಲ್ಲಿ ನೆಲೆಸಿರುವ ಅಪ್ಪನೆರವಂಡ ಎಸ್. ಅಪ್ಪಣ್ಣ ಅವರು ಮಾರ್ಚ್ ೧೪ರಂದು ತಮ್ಮ ಜೀವನದ ೧೦೦ ವರ್ಷ ಪೂರೈಸಿದ್ದಾರೆ.
ಪ್ರಸ್ತುತದ ಪೀಳಿಗೆಗೆ ಮಾದರಿ ಯಾಗಿರುವ ಅಪ್ಪಣ್ಣ ತಾತರ ೧೦೦ನೆಯ ಹುಟ್ಟುಹಬ್ಬದ ಸಂಭ್ರಮವನ್ನು ಅವರ ಸಂಸಾರಸ್ಥರು, ಬಂಧು-ಬಳಗದವರು ಹೃದಯ ಸ್ಪರ್ಶಿಯಾಗಿ ಆಚರಿಸಿ ಶುಭಕೋರಿ ಆಶೀರ್ವಾದ ಪಡೆದುಕೊಂಡರು.
೧೯೨೨ ಮಾರ್ಚ್ ೧೪ರಂದು ಪಾರಾಣೆಯ ಅಪ್ಪನೆರವಂಡ ಸೋಮಪ್ಪ ಹಾಗೂ ಅಮ್ಮವ್ವ ದಂಪತಿಯ ಪುತ್ರರಾಗಿ ಜನಿಸಿದ ಅಪ್ಪಣ್ಣ ಅವರು ಆರಂಭದಲ್ಲಿ ಪಾರಾಣೆ ಶಾಲೆಯಲ್ಲಿ ಉಪಾಧ್ಯಾಯ ರಾಗಿದ್ದರು. ಈ ಸಂದರ್ಭದಲ್ಲಿ ೧೯೪೩ರಲ್ಲಿ ಎರಡನೆಯ ವಿಶ್ವ ಮಹಾಯುದ್ಧ ನಡೆಯುತ್ತಿದ್ದ ಸಂದರ್ಭ ಇವರು ಸೇನೆಯತ್ತ ತಮ್ಮ ಚಿತ್ತ ಹರಿಸಿದರು. ತಮ್ಮ ಪೋಷಕರಿಗೆ ಅಥವಾ ಇತರರಿಗೆ ಈ ಮಾಹಿತಿ ಯನ್ನು ತಿಳಿಸದೆ ಅವರಾಗಿಯೇ ಜಿಲ್ಲೆ ಬಿಟ್ಟು ಸೈನ್ಯಕ್ಕೆ ಸೇರಿಕೊಂಡು ದೇಶದ ಪರವಾಗಿ ಯುದ್ಧದಲ್ಲಿ ಭಾಗಿಯಾಗಿದ್ದು ಇವರ ಹಿರಿಮೆ. ಆ ಸಂದರ್ಭ ಇವರ ತಾಯಿ ಪತಿಯನ್ನು ಕಳೆದುಕೊಂಡಿದ್ದರು. ಇದ್ದ ಒಬ್ಬನೇ ಪುತ್ರ ಹೇಳದೆ-ಕೇಳದೆ ಸೈನ್ಯ ಸೇರಿಕೊಂಡಿದ್ದರು. ಒಂಟಿಯಾದ ತಾಯಿ ಅಮ್ಮವ್ವ ಕೆಲ ವರುಷ ಸೇನೆಯೊಂದಿಗೆ ವ್ಯವಹರಿಸಿ ಇವರನ್ನು ಮತ್ತೆ ಈ ಆಧಾರದಲ್ಲಿ ಮರಳಿ ಕರೆಸಿಕೊಂಡಿದ್ದರು. ಇದು ಇವರ ಇತಿಹಾಸವಾಗಿದೆ. ಸೇನೆಯಿಂದ ಮರಳಿದ ಅಪ್ಪಣ್ಣ ಅವರು ಅರಣ್ಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ ಗೆಜೆಟೆಡ್ ಅಧಿಕಾರಿಯಾಗಿ ನಿವೃತ್ತ ರಾಗಿದ್ದಾರೆ. ಬಳಿಕ ಪುತ್ರ ಕರ್ನಾಟಕ ಬ್ಯಾಂಕ್ನ ನಿವೃತ್ತ ಅಧಿಕಾರಿ ತಿಮ್ಮಯ್ಯ ಅವರೊಟ್ಟಿಗೆ ನೆಲೆಸಿದ್ದಾರೆ. ಇವರ ಇಬ್ಬರು ಪುತ್ರಿಯರಲ್ಲಿ ಹಿರಿಯರಾದ ಕಾವೇರಿ ಅವರು ಹೈಕೋರ್ಟ್ ನ್ಯಾಯಾಧೀಶರಾಗಿದ್ದ ದಿವಂಗತ ಮಾಳೇಟಿರ ಚಿಣ್ಣಪ್ಪ ಅವರ ಪತ್ನಿ. ಮತ್ತೊಬ್ಬರು ಪ್ರಸ್ತುತ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿರುವ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು.
ಅಪ್ಪಣ್ಣ ತಾತರ ಹುಟ್ಟು ಹಬ್ಬವನ್ನು ಅವರ ಸಂಸಾರಸ್ಥರು, ಬಂಧುಬಳಗ ದವರೆಲ್ಲರು ಮಕ್ಕಳು, ಮರಿಮಕ್ಕಳ ಸಹಿತವಾಗಿ ಆಚರಿಸಿದರು. ಕೇಕ್ ಕಟ್ಟಿಂಗ್, ಅದ್ಧೂರಿಯ ಭೋಜನ, ಉಡುಗೊರೆಗಳ ನೀಡಿಕೆ ಶುಭಹಾರೈಕೆಯೊಂದಿಗೆ ಹಿರಿಯರ ಆಶೀರ್ವಾದವನ್ನು ಪಡೆಯಲಾಯಿತು.
ಸಂಬAಧಿಯಾದ ಮಾಜಿ ಸಚಿವ ಯಂ.ಸಿ. ನಾಣಯ್ಯ, ಸ್ನೇಹಿತರಾದ ಕೊಂಗAಡ ಎಸ್. ದೇವಯ್ಯ ಸೇರಿದಂತೆ ಹಲವರು ಪುಟ್ಟ ಸಮಾರಂಭದಲ್ಲಿ ಭಾಗಿಗಳಾಗಿದ್ದರು.
ನೂರು ವರ್ಷದ ಕೇಕ್ ಕಟ್ ಮಾಡಿ ಸಂಭ್ರಮ... ಕಿರಿಯರಿಂದ ಉಡುಗೊರೆ, ಮೊಮ್ಮಕ್ಕಳಿಂದ ಸೆಲ್ಫಿ, ಯುವಕರನ್ನು ನಾಚಿಸುವಂತಹ ವಾಕ್ ಗಮನ ಸೆಳೆದಿತ್ತು. ಇವರ ಮಕ್ಕಳು, ಮೊಮ್ಮಕ್ಕಳು, ಕುಟುಂಬಸ್ಥರು ಎಲ್ಲರೂ ಸೇರಿ ಏನಿಲ್ಲವೆಂದರೂ ೮೦ ಮಂದಿ ಕುಟುಂಬ ಸದಸ್ಯರು ಆಗಮಿಸಿ ಹ್ಯಾಪಿ ಬರ್ತ್ಡೆ ಅಂತ ವಿಶ್ ಮಾಡಿ ಆಶೀರ್ವಾದ ಪಡೆದಿದ್ದಾರೆ. ನಿವೃತ್ತಿಯ ಬಳಿಕವೂ ಇವರು ಸದಾ ಕ್ರಿಯಾಶೀಲ. ದಿನಕ್ಕೆ ಏನಿಲ್ಲ ಅಂದರೂ ನಾಲ್ಕು ಕಿಲೋ ಮೀಟರ್ ವಾಕ್ ಮಾಡುತ್ತಾರೆ ಶತಾಯುಷಿ. ಮಿತವಾದ ಆಹಾರ, ಶಿಸ್ತಿನ ಬದುಕೇ ಇವರ ಆರೋಗ್ಯದ ಗುಟ್ಟು ಅಂತಾರೆ ಕುಟುಂಬದ ಸದಸ್ಯರು. ಮತ್ತೊಂದು ವಿಶೇಷ ಎಂದರೆ ಈ ತಾತನಿಗೆ ಬಿಪಿ ಯಾಗಲಿ, ಸಕ್ಕರೆ ಕಾಯಿಲೆಯಾಗಲಿ ಯಾವುದೂ ಇಲ್ಲ. ನಿಜಕ್ಕೂ ನಮ್ಮ ತಂದೆ ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ ಎನ್ನುತ್ತಾರೆ ಪುತ್ರ ತಿಮ್ಮಯ್ಯ. ಪ್ರತಿದಿನವೂ ಇವರಿಗೆ ವಾಕಿಂಗ್ ಮಾಡಲೇಬೇಕು. ಇದಕ್ಕೆ ಪುತ್ರ ತಿಮ್ಮಯ್ಯ ನೆರವಾಗುತ್ತಿದ್ದಾರೆ.
ಶತಾಯುಷಿ ತಾತ ಇನ್ನಷ್ಟು ವರ್ಷ ಬದುಕಿ-ಬಾಳಲಿ ಎಂಬದು ಹಾರೈಕೆ.