ಶನಿವಾರಸಂತೆ, ಮಾ. ೧೮: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಬುದ್ಧಿಶಕ್ತಿ, ಪ್ರತಿಭೆ, ಛಲವನ್ನು ಬೆಳಕಿಗೆ ತರುವ ಕಾರ್ಯ ವಿದ್ಯಾಸಂಸ್ಥೆಗಳಿAದ ಆಗಬೇಕಿದೆ ಎಂದು ಮೈಸೂರಿನ ಎಸ್.ವಿ.ಜಿ. ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ವಿಶ್ವನಾಥ್ ಶೇಷಾಚಲ ಅಭಿಪ್ರಾಯಪಟ್ಟರು.

ಪಟ್ಟಣದ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ಲಯನ್ಸ್ ಸಂಸ್ಥೆ, ಕ್ಷೇತ್ರ ಶಿಕ್ಷಣ ಇಲಾಖೆ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮೈಸೂರಿನ ಎಸ್.ವಿ.ಜಿ. ಎಜುಕೇಶನ್ ಫೌಂಡೇಶನ್ ಸಹಭಾಗಿತ್ವದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಕುರಿತು ನಡೆದ ಆಪ್ತ ಸಮಾಲೋಚನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಿಕ್ಷಣ ತಜ್ಞ ಹೆಚ್.ಪಿ. ಮೋಹನ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ ಮುಖ್ಯವಾಗಿದ್ದು, ಮುಂಜಾನೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಪ್ರಾರ್ಥನೆ ಮಾಡಿ, ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಪರೀಕ್ಷೆ ಭಯವನ್ನು ಬಿಟ್ಟು ಸತತ ಅಭ್ಯಾಸದಿಂದ ವಿದ್ಯಾರ್ಥಿ ಶೈಕ್ಷಣಿಕ ಪ್ರಗತಿ ಸಾಧಿಸಬಹುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ಮಾತನಾಡಿ, ಕೋವಿಡ್ ಲಾಕ್‌ಡೌನ್ ನಿಂದಾಗಿ ೨ ವರ್ಷ ಪರೀಕ್ಷೆಗಳ ಬಗ್ಗೆ ಗೊಂದಲವಿತ್ತು. ವಿದ್ಯಾರ್ಥಿಗಳ ಗೊಂದಲ, ಭಯವನ್ನು ಹೋಗಲಾಡಿಸುವ ಉದ್ದೇಶದಿಂದ ಆಪ್ತ ಸಮಾಲೋಚನಾ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಮೈಸೂರಿನ ಸಿ.ಎನ್.ಎಂ. ಪಿ.ಯು. ಕಾಲೇಜಿನ ಪ್ರಾಂಶುಪಾಲ ಕೆ.ಎಸ್. ನಾಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಹೃದಯದಲ್ಲಿ ಪರೀಕ್ಷೆ ಬಗ್ಗೆ ಭಯವೆಂಬ ಯುದ್ಧ ನಡೆಯುತ್ತಿರುತ್ತದೆ. ಆ ಭಯವನ್ನು ಆಪ್ತ ಸಮಾಲೋಚನಾ ಕಾರ್ಯಕ್ರಮ ಹೋಗಲಾಡಿಸಿ ಆತ್ಮಸ್ಥೆöÊರ್ಯವನ್ನು ತುಂಬುವ ಕೆಲಸ ಮಾಡುತ್ತದೆ ಎಂದರು.ಲಯನ್ಸ್ ಸಂಸ್ಥೆ ಖಜಾಂಚಿ ಬಿ.ಕೆ. ಚಿಣ್ಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಕೆ. ಅಪ್ಪಸ್ವಾಮಿ, ಮುಖ್ಯ ಶಿಕ್ಷಕ ನರಸಿಂಹ ಮೂರ್ತಿ, ವಿಘ್ನೇಶ್ವರ ವಿದ್ಯಾಸಂಸ್ಥೆ ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್, ಶಿಕ್ಷಕ ಕೆ.ಪಿ. ಜಯಕುಮಾರ್, ಸುಪ್ರಜಾ ಗುರುಕುಲ ವಿದ್ಯಾಸಂಸ್ಥೆ ಪ್ರಾಂಶುಪಾಲೆ ಸುಜಲಾದೇವಿ, ಕಾವೇರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಅಶ್ವಥ್ ಉಪಸ್ಥಿತರಿದ್ದರು.