ಸೋಮವಾರಪೇಟೆ,ಮಾ.೧೮: ತಾಲೂಕಿನ ಗರ್ವಾಲೆ ಗ್ರಾಮದಲ್ಲಿ ವನ್ಯಪ್ರಾಣಿಗಳ ಹಾವಳಿ ಮಿತಿಮೀರಿದ್ದು, ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಮೃಗಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಬೋನು ಅಳವಡಿಸಲಾಗಿದೆ.
ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಟ್ಲು ಗ್ರಾಮ ಸುತ್ತಮುತ್ತ ಹುಲಿ/ಚಿರತೆ ಹಾವಳಿ ಹಾವಳಿ ಮಾಮೂಲಿಯಾಗಿದ್ದು, ಈಗಾಗಲೇ ಹತ್ತಾರು ಜಾನುವಾರುಗಳು ಬಲಿಯಾಗಿವೆ. ಕಳೆದ ತಿಂಗಳಷ್ಟೇ ಗ್ರಾಮದ ಪಿ.ಎಂ. ಮೊಣ್ಣಯ್ಯ ಅವರಿಗೆ ಸೇರಿದ ಎರಡು ಜಾನುವಾರುಗಳನ್ನು ಬಲಿ ಪಡೆದಿದ್ದ ವನ್ಯ ಮೃಗ, ನಿನ್ನೆ ದಿನ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ೨ ವರ್ಷದ ಕರುವೊಂದನ್ನು ಕೊಂದು ಹಾಕಿದೆ.
ನಿನ್ನೆ ಬೆಳಿಗ್ಗೆ ಇತರ ಜಾನುವಾರು ಗಳೊಂದಿಗೆ ೨ ವರ್ಷದ ಕರುವನ್ನು ಮೇಯಲು ಬಿಡಲಾಗಿತ್ತು. ಸಂಜೆ ವೇಳೆಗೆ ಎಲ್ಲಾ ಜಾನುವಾರುಗಳು ಕೊಟ್ಟಿಗೆಗೆ ಮರಳಿದ್ದು, ಕರು ಮಾತ್ರ ಆಗಮಿಸಲಿಲ್ಲ. ಹುಡುಕಾಟ ನಡೆಸಿದ ಸಂದರ್ಭ ಕೊಟ್ಟಿಗೆ ಸಮೀಪದಲ್ಲೇ ಕರುವಿನ ಕಳೇಬರ ಕಂಡುಬAದಿದ್ದು, ವನ್ಯಪ್ರಾಣಿ ಧಾಳಿಯಿಂದ ಹತ್ಯೆಯಾಗಿರುವುದು ಗೋಚರಿಸಿದೆ. ಈಗಾಗಲೇ ಮೂರು ಜಾನುವಾರುಗಳನ್ನು ಕಳೆದುಕೊಂಡಿದ್ದು, ಅರಣ್ಯ ಇಲಾಖೆಯಿಂದ ಪರಿಹಾರ ಒದಗಿಸಬೇಕು ಹಾಗೂ ವನ್ಯಪ್ರಾಣಿಯ ಸೆರೆಗೆ ಕ್ರಮ ಕೈಗೊಳ್ಳಬೇಕೆಂದು ಮೊಣ್ಣಯ್ಯ ಅವರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ಇದಕ್ಕೆ ತಕ್ಷಣ ಸ್ಪಂದಿಸಿರುವ ಅರಣ್ಯ ಇಲಾಖಾ ಅಧಿಕಾರಿಗಳು ಮುಟ್ಲು ಗ್ರಾಮದಲ್ಲಿ ವನ್ಯಪ್ರಾಣಿ ಸೆರೆಗೆ ಬೋನು ಅಳವಡಿಸಿದ್ದಾರೆ. ಈ ಭಾಗದಲ್ಲಿ ಹುಲಿ/ಚಿರತೆಗಳ ಹಾವಳಿ ನಿರಂತರವಾಗಿದ್ದು, ಗ್ರಾಮಸ್ಥರು ಪ್ರಾಣಭಯದಿಂದಲೇ ಜೀವಿಸಬೇಕಿದೆ. ಜಾನುವಾರುಗಳಿಗೂ ಗ್ಯಾರಂಟಿ ಇಲ್ಲವಾಗಿದೆ. ಜಾನುವಾರು ಗಳ ಮೇಲೆ ಧಾಳಿ ನಡೆಸುತ್ತಿರುವ ವನ್ಯಪ್ರಾಣಿಯ ಸೆರೆಗೆ ಅರಣ್ಯ ಇಲಾಖೆ ಬೋನು ಅಳವಡಿಸಿರುವ ಕ್ರಮ ಶ್ಲಾಘನೀಯ ಎಂದು ಗ್ರಾಮಸ್ಥ ಗಣಪತಿ ಅಭಿಪ್ರಾಯಿಸಿದ್ದಾರೆ.