ಭಾಗಮಂಡಲ, ಮಾ. ೧೬: ಭಾಗಮಂಡಲ ವ್ಯಾಪ್ತಿಯ ಚೇರಂಗಾಲ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಆನೆಗಳ ಹಾವಳಿಯಿಂದ ಗ್ರಾಮಸ್ಥರು ತತ್ತರಿಸಿದ್ದು ಆತಂಕಕ್ಕೀಡಾಗಿದ್ದಾರೆ.

ಭತ್ತದ ಬೆಳೆ ಕಟಾವಿನ ಸಂದರ್ಭದಲ್ಲಿ ಬೆಳೆಹಾನಿ ಮಾಡುತ್ತಿದ್ದ ಕಾಡಾನೆಗಳು ಇದೀಗ ಕಾಫಿ ತೋಟಗಳಿಗೆ ದಾಳಿಇಡುತ್ತಿವೆ. ಕಳೆದ ೪ ದಿನಗಳಿಂದ ಗ್ರಾಮದಲ್ಲಿ ಮೂರು ಆನೆಗಳು ಬೀಡು ಬಿಟ್ಟಿದ್ದು ಕಾಫಿ, ಬಾಳೆ ಅಡಿಕೆ, ತೆಂಗು ತೋಟಗಳನ್ನು ನಾಶಪಡಿಸುತ್ತಿದ್ದು, ಅಪಾರ ನಷ್ಟ ಸಂಭವಿಸಿದೆ. ಚೇರಂಗಾಲ ಗ್ರಾಮದ ಕೋಡಿ, ಮತ್ತಾರಿ, ಪೆರುಬಾಯಿ ಕುಟುಂಬಗಳ ಹಲವು ಕೃಷಿಕರ ತೋಟಗಳಲ್ಲಿ ಕಳೆದ ಹಲವು ದಿನಗಳಿಂದ ಆನೆಗಳು ದಾಳಿ ಇಡುತ್ತಿವೆ. ಹಗಲು- ರಾತ್ರಿ ವೇಳೆ ತೋಟಕ್ಕೆ ನುಗ್ಗಿ ದಾಳಿ ನಡೆಸುತ್ತಿವೆ. ಸಾರ್ವಜನಿಕರು ಆತಂಕದಿAದ ರಸ್ತೆಯಲ್ಲಿ ನಡೆದಾಡುವಂತೆ ಮಾಡುತ್ತಿದೆ.

ಕಾಡಾನೆಗಳ ಉಪಟಳದ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ದೂರು ನೀಡಿದ್ದು ಅರಣ್ಯ ಇಲಾಖೆಯ ಸಿಬ್ಬಂದಿ ಆನೆಗಳನ್ನು ಕಾಡಿಗಟ್ಟುವ ಪ್ರಯತ್ನ ನಡೆಸಿದ್ದರೂ ಫಲಪ್ರದವಾಗಿಲ್ಲ. ಸಮಸ್ಯೆ ಬಗ್ಗೆ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಂಡು ಕಾಡಿಗಟ್ಟುವ ಕಾರ್ಯ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.