ಸೋಮವಾರಪೇಟೆ, ಮಾ. ೧೬: ಜಿಲ್ಲೆಯಲ್ಲಿ ಜಾತ್ಯತೀತ ಜನತಾದಳ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸಿ, ಯುವ ಜನಾಂಗವನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಮೂಲಕ ಚುನಾವಣೆಗೆ ಪಕ್ಷವನ್ನು ಸದೃಢಗೊಳಿಸುವ ಬಗ್ಗೆ ಮುಖಂಡರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಮಡಿಕೇರಿಯ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಯುವ ಜನತಾದಳ ಸಭೆಯಲ್ಲಿ ಭಾಗಿಯಾಗಿದ್ದ ಪಕ್ಷದ ಮುಖಂಡರು, ಪಕ್ಷ ಸಂಘಟನೆ, ಬಲವರ್ಧನೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ನೀಡಿದ ಆಡಳಿತ ಹಾಗೂ ನಂತರದ ಸರ್ಕಾರಗಳು ನೀಡಿದ ಆಡಳಿತದ ವ್ಯತ್ಯಾಸವನ್ನು ಜನಸಾಮಾನ್ಯರು ಅರಿತಿದ್ದಾರೆ. ರೈತರು ಹಾಗೂ ಜನ ಸಾಮಾನ್ಯರ ಅಭ್ಯುದಯಕ್ಕೆ ಕುಮಾರಸ್ವಾಮಿ ಕೈಗೊಂಡ ನಿರ್ಧಾರಗಳು, ಯೋಜನೆಗಳು ಇಂದಿಗೂ ಜನರ ಮನದಲ್ಲಿದೆ. ಇವುಗಳನ್ನು ಮುಂದಿಟ್ಟುಕೊAಡು ಗ್ರಾಮ ಮಟ್ಟದಿಂದ ಪಕ್ಷವನ್ನು ಸದೃಢಗೊಳಿಸಬೇಕಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್ ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಯುವ ಜೆಡಿಎಸ್ ಅಧ್ಯಕ್ಷ ವಿಶ್ವ ಮಾತನಾಡಿ, ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಿ ಪಕ್ಷವನ್ನು ಬಲಪಡಿಸಬೇಕು. ಕಾರ್ಯಕರ್ತರನ್ನು ಸಂಘಟಿಸುವ ಮೂಲಕ ಆತ್ಮವಿಶ್ವಾಸ ತುಂಬಬೇಕು. ಯುವ ಜೆಡಿಎಸ್ ವತಿಯಿಂದ ಪ್ರವಾಸ ಕೈಗೊಂಡು ಪಕ್ಷವನ್ನು ಬಲಪಡಿಸುವ ಬಗ್ಗೆ ರೂಪುರೇಷೆ ಸಿದ್ಧ್ದಪಡಿಸಲಾಗುವುದು ಎಂದರು.

ಸಭೆಯಲ್ಲಿ ಮಡಿಕೇರಿ ತಾಲೂಕು ಯುವ ಜೆಡಿಎಸ್ ಅಧ್ಯಕ್ಷರನ್ನಾಗಿ ಸಂಜು ಕಾವೇರಪ್ಪ, ವೀರಾಜಪೇಟೆ ತಾಲೂಕು ಅಧ್ಯಕ್ಷರನ್ನಾಗಿ ಸೈಫುದ್ದೀನ್ ಚಾಮಿಯಾಲ ಅವರುಗಳನ್ನು ಆಯ್ಕೆ ಮಾಡಲಾಯಿತು.

ಪಕ್ಷದ ಪ್ರಧಾನ ಕಾರ್ಯದರ್ಶಿ ಜಾಶಿರ್, ವಕ್ತಾರ ಆದರ್ಶ್ ತಮ್ಮಯ್ಯ, ಸ್ವಾಗತ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ತ್ರಿಶೂಲ್, ಶರತ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇತರ ಪಕ್ಷಗಳ ೨೦ಕ್ಕೂ ಅಧಿಕ ಯುವ ಕಾರ್ಯಕರ್ತರು ಸಭೆಯಲ್ಲಿ ಜೆಡಿಎಸ್ ಸೇರ್ಪಡೆಗೊಂಡರು.