ಮಡಿಕೇರಿ, ಮಾ. ೧೬: ಕಳೆದ ವಾರ ಬೆಂಗಳೂರಿನಲ್ಲಿ ಸಂಭವಿಸಿದ್ದ ರಸ್ತೆ ಅವಘಡ ವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ
ಜಿಲ್ಲೆಯ ಯುವಕನೋರ್ವ ದುರ್ಮರಣಗೊಂಡಿದ್ದಾರೆ.
ಮಡಿಕೇರಿಯ ಕೂರ್ಗ್ ಕುಸಿನ್ ಹೊಟೇಲ್ ಮಾಲೀಕರಾದ ಮೂಲತಃ ಬಿಳಿಗೇರಿಯವರಾದ ಕಣ್ಣಚಂಡ ಗಿರೀಶ್ ಪೆಮ್ಮಯ್ಯ ಹಾಗೂ ಪುಷ್ಪ ದಂಪತಿಯ ಪುತ್ರ ಸ್ವರೂಪ್ ಅಯ್ಯಪ್ಪ ಮೃತ ಯುವಕ.
ಸ್ವರೂಪ್ ಅಯ್ಯಪ್ಪ ಹಾಗೂ ಸಹೋದರ ಸುಬ್ಬಯ್ಯ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಸುಬ್ಬಯ್ಯ ಇತ್ತೀಚೆಗಷ್ಟೆ ಉದ್ಯೋಗಕ್ಕೆ ಸೇರಿದ್ದು, ಕೆಲಸದ ಸ್ಥಳದಿಂದ ಮನೆಗೆ ಹಿಂತಿರುಗಲು ರಾತ್ರಿ ವಾಹನದ ಸಮಸ್ಯೆ ಇತ್ತೆನ್ನಲಾಗಿದೆ. ಈ ಕಾರಣದಿಂದಾಗಿ ಅವರನ್ನು ಕರೆತರಲು ಸ್ವರೂಪ್ ಅಯ್ಯಪ್ಪ ಸ್ನೇಹಿತರೊಬ್ಬರ ಕಾರಿನಲ್ಲಿ ತೆರಳಿದ್ದರು. ಕಾರನ್ನು ಇವರ ಮತ್ತೋರ್ವ ಸ್ನೇಹಿತ ಚಾಲಿಸುತ್ತಿದ್ದು, ಬಾಣಸವಾಡಿ ರಿಂಗ್ ರಸ್ತೆಯ ಬಳಿ ಅವಘಡ ಸಂಭವಿಸಿತ್ತು. ಇವರ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿದ್ದು, ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಗಕ್ಕೂ ಅಪ್ಪಳಿಸಿತ್ತೆನ್ನಲಾಗಿದೆ. ಈ ಸಂದರ್ಭ ಮತ್ತೊಂದು ಕಾರು ಡಿಕ್ಕಿಯಾಗಿದ್ದು, ಮೂರು ವಾಹನಗಳು ಪರಸ್ಪರ ಡಿಕ್ಕಿಯಾಗಿದೆ ಎಂದು ಹೇಳಲಾಗಿದೆ.
ಘಟನೆಯಿಂದ ಸ್ವರೂಪ್ ಅಯ್ಯಪ್ಪರಿಗೆ ಗಂಭೀರ ಸ್ವರೂಪದ ಪೆಟ್ಟಾಗಿದ್ದು, ಅಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಕೆಲವು ದಿನಗಳ ಕಾಲ ಇವರು ಪ್ರಜ್ಞಾಹೀನರಾಗಿಯೇ ಇದ್ದು, ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.
ಸಹೋದರ ಸುಬ್ಬಯ್ಯ ಸಣ್ಣಪುಟ್ಟ ಗಾಯದೊಂದಿಗೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಮೃತ ಯುವಕನ ಮಿದುಳು ನಿಷ್ಕಿçಯಗೊಂಡಿದ್ದು, ಸಾವಿಗೀಡಾಗಿರುವುದಾಗಿ ಹೇಳಲಾಗಿದೆ. ಇದೀಗ ಪೋಷಕರು ಶೋಕ ಸಾಗರದ ನಡುವೆ ಮೃತಪಟ್ಟ ಯುವಕನ ಅಂಗಾAಗಗಳನ್ನು ದಾನ ಮಾಡುವ ನಿರ್ಧಾರದೊಂದಿಗೆ ಮಾನವೀಯತೆ ಮೆರೆದಿದ್ದಾರೆ.
ಮೃತದೇಹವನ್ನು ತಾ. ೧೭ ರಂದು ಜಿಲ್ಲೆಗೆ ತರಲಾಗುತ್ತಿದ್ದು, ಸ್ವಗ್ರಾಮ ಬಿಳಿಗೇರಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ. ಈ ದುರ್ಘಟನೆ ಬೆಂಗಳೂರು ಬಾಣಸವಾಡಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ವರಮಾವು ಸಿಗ್ನಲ್ಸ್ ಬಳಿ ನಡೆದಿದ್ದು, ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.