ಸುಂಟಿಕೊಪ್ಪ, ಮಾ. ೧೫: ಸುಂಟಿಕೊಪ್ಪ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಇದೀಗ ಶ್ರದ್ಧಾಪೂರ್ವಕ ಭಕ್ತಿ ಭಾವದೊಂದಿಗೆ ಧರ್ಮ ದೈವಗಳ ನೇಮ, ಕೋಲಗಳು ಮೇಳೈಸುತ್ತಿವೆ. ದೈವ ಕೋಲಗಳು ಗ್ರಾಮಗಳಲ್ಲಿ ಹಬ್ಬದ ವಾತಾವರಣವನ್ನು ಮೂಡಿಸಿವೆ. ಕಳೆದ ವರ್ಷ ಕೊರೊನಾದಿಂದ ತೆರೆಗೆ ಸರಿದಿದ್ದ ದೈವಗಳು ಈ ಬಾರಿ ವಿಜೃಂಭಿಸುತ್ತಿವೆ. ಈಗಾಗಲೇ ನಾಕೂರು ಗ್ರಾಮದ ಮಂಜಿಕೆರೆಯಲ್ಲಿ ಕೊರಗಜ್ಜ ದೈವದ ನೇಮ ಸಂಪನ್ನಗೊAಡಿದೆ. ಗರಗಂದೂರಿನಲ್ಲಿ ಕುರುಂಭ ಭಗವತಿ ಭದ್ರಕಾಳಿ ಉತ್ಸವ, ಹರದೂರಿನಲ್ಲಿ ವಿಷ್ಣುಮೂರ್ತಿ ಒತ್ತೆಕೋಲ, ಕುಲ್ಚಟ್ ದೈವ, ಗುಳಿಗನ ಕೋಲ ಹಾಗೂ ಕೆದಕಲ್ ಗ್ರಾಮದ ೭ನೇ ಮೈಲ್ ನಲ್ಲಿ ಕೊರಗಜ್ಜನ ಕಲ್ಲುರ್ಟಿ ದೈವದ ನೇಮ ನೆರವೇರಿದೆ. ಸುಂಟಿಕೊಪ್ಪದಲ್ಲಿ ಗ್ರಾಮದೇವತೆಯ ಪೂಜಾ ಕಾರ್ಯ, ಮಂಜಿಕೆರೆಯಲ್ಲಿ ಪಾಷಣಮೂರ್ತಿ ನೇಮ, ಗದ್ದೆಹಳ್ಳದಲ್ಲಿ ಕೊಡಗನ್ನೂರು ಭಗವತಿಯ ಉತ್ಸವ, ಕೊಡಗರಹಳ್ಳಿಯ ಚಾಮುಂಡೇಶ್ವರಿ ದೇವಿಯ ಹಾಗೂ ಪರಿವಾರ ದೈವಗಳ ನೇಮ, ಹರದೂರು ಗ್ರಾಮದಲ್ಲಿ ಮುಗೇರ ದೈವಗಳ ನೇಮ, ಸುಂಟಿಕೊಪ್ಪ ಉಲುಗುಲಿ ಗ್ರಾಮದ ಬೆಳ್ಳಾರಿಕಮ್ಮ ದೇವಿಯ ಉತ್ಸವ, ನಾರ್ಗಾಣೆ ಗ್ರಾಮದ ಶ್ರೀದೇವಿ ಬಡಾವಣೆಯಲ್ಲಿ ಶ್ರೀ ಅಣ್ಣಪ್ಪ ದೇವಸ್ಥಾನದಲ್ಲಿ ಪಾಷಣ ಮೂರ್ತಿ, ಅಣ್ಣಪ್ಪ ಸ್ವಾಮಿ ಗುಳಿಗ ಚಾಮುಂಡಿ ದೈವಗಳ ಅಬ್ಬರ, ತೆರೆಗಳು, ಕೋಲಗಳು ಸೇರಿದಂತೆ ಹಲವು ಉತ್ಸವಗಳು ನಡೆಯಲಿವೆ. ಕಳೆದ ವರ್ಷ ಕೊರೊನಾ ಕಾರಣದಿಂದ ನಿಷೇಧಕ್ಕೊಳಗಾಗಿದ್ದ ದೈವಗಳು ಈ ಬಾರಿ ವಿಜೃಂಭಿಸುತ್ತಿದ್ದು, ಕೊಡಗಿನಲ್ಲಿ ಬಂದು ನೆಲೆಸಿರುವ ದಕ್ಷಿಣ ಕನ್ನಡ, ಕೇರಳ ಹಿಂದಿನ ಗುರುಹಿರಿಯರು ನಡೆಸುತ್ತಿದ್ದ ಧರ್ಮ ದೈವಗಳ ನೇಮ ಕಾವೇರಿ ಮಣ್ಣಿನಲ್ಲಿ ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
-ರಾಜು ರೈ