ಶ್ರೀಮಂಗಲ, ಮಾ. ೧೬: ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿಹರ ಗ್ರಾಮದ ಮನ್ನೆರ ಕುಟುಂಬದ ಆಶ್ರಯದಲ್ಲಿ ಕೊಡವ ಕೌಟುಂಬಿಕ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್, ಮನ್ನೆರ ಕಪ್-೨೦೨೨ಅನ್ನು ಮಾರ್ಚ್ ೨೨ ರಿಂದ ೨೯ರವರೆಗೆ ಹರಿಹರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಮನ್ನೆರ ಕುಟುಂಬದ ಅಧ್ಯಕ್ಷ ಮನ್ನೆರ ರಮೇಶ್ ತಿಳಿಸಿದ್ದಾರೆ.
ಕ್ರಿಕೆಟ್ ಮೈದಾನ ಸಿದ್ಧತಾ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದು, ಈ ಸಂದರ್ಭ ಅವರು ಈ ಬಗ್ಗೆ ಮಾಹಿತಿ ನೀಡಿದರು. ಮಾರ್ಚ್ ೧೮ ರವರೆಗೆ ಭಾಗವಹಿಸುವ ತಂಡಕ್ಕೆ ಪ್ರವೇಶಾತಿಗೆ ಅಂತಿಮ ಅವಕಾಶವಿದೆ.
ಪಂದ್ಯಾವಳಿಯನ್ನು ಮನ್ನೆರ ಕುಟುಂಬ ಆಶ್ರಯದಲ್ಲಿ ಅಯೋಜಿಸಲಾಗಿದ್ದು, ಮನ್ನೆರ ಕುಟುಂಬದ ತವರು ಮನೆ ಮಹಿಳೆಯರು, ಗ್ರಾಮಸ್ಥರ ಸಹಕಾರದಲ್ಲಿ ನಡೆಸಲಾಗುತ್ತಿದೆ. ಪ್ರಾಕೃತಿಕ ವಿಕೋಪ ಮತ್ತು ಕೋವಿಡ್-೧೯ ಸೋಂಕು ಸಾಂಕ್ರಾಮಿಕ ಖಾಯಿಲೆಯಿಂದ ಹಲವಾರು ಕೌಟುಂಬಿಕ ಕ್ರೀಡಾಕೂಟ ಸ್ಥಗಿತವಾಗಿದ್ದು, ಕೊಡವ ಕುಟುಂಬಗಳಲ್ಲಿ ಸ್ನೇಹ-ಬಾಂಧವ್ಯ ಬೆಸೆಯಲು, ಸಹಕಾರ, ಒಗ್ಗಟ್ಟು ಮೂಡಿಸುವ ನಿಟ್ಟಿನಲ್ಲಿ ಪಂದ್ಯಾವಳಿ ಮೂಲಕ ವೇದಿಕೆ ಮಾಡಿಕೊಡಲು ಇಂತಹ ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮನ್ನೆರ ಕುಟುಂಬದ ಕಾರ್ಯದರ್ಶಿ ಅಜಿತ್ ಕಾರ್ಯಪ್ಪ ಅವರು ಮಾತನಾಡಿ ವಿಜೇತ ತಂಡಕ್ಕೆ ರೂ. ೩೦ ಸಾವಿರ ನಗದು ಮತ್ತು ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ.೧೫ ಸಾವಿರ ನಗದು ಮತ್ತು ಟ್ರೋಫಿ, ೩ನೇ ಸ್ಥಾನ ಪಡೆಯುವ ತಂಡಕ್ಕೆ ರೂ.೫ ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುತ್ತದೆ ಎಂದರು. ಮನ್ನೆರ ಕುಟುಂಬದ ಖಜಾಂಚಿ ಪವಿನಾಚಪ್ಪ ಅವರು ಮಾತನಾಡಿ, ಟೂರ್ನಮೆಂಟ್ ನಲ್ಲಿ ಪ್ರತಿ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್, ಮ್ಯಾನ್ ಆಫ್ ದಿ ಸಿರೀಸ್, ಬೆಸ್ಟ್ ಬ್ಯಾಟ್ಸ್ ಮ್ಯಾನ್, ಬೆಸ್ಟ್ ಬೌಲರ್, ಬೆಸ್ಟ್ ಫೀಲ್ಡರ್ ಆಯ್ಕೆ ಮಾಡಿ ಟ್ರೋಫಿ ನೀಡಲಾಗುವುದು ಎಂದರು. ಈ ಸಂದರ್ಭ ಮನ್ನೆರ ಕುಟುಂಬಸ್ಥರು, ಹರಿಹರ ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.