ಮಡಿಕೇರಿ, ಮಾ. ೧೪ : ಎಲ್ಲಿ ಭಾಷೆ ಇಲ್ಲವೋ ಅಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗೂ ಅದನ್ನು ನಂಬಿದವರ ಬದುಕು ನಾಶವಾಗುತ್ತದೆ, ಸಂಸ್ಕೃತಿ ಮತ್ತು ಸಂಸ್ಕಾರ ಇದ್ದಲ್ಲಿ ಮಾತ್ರ ಉತ್ತಮ ಬದುಕು ಸಾಧ್ಯ ಎಂದು ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಅಭಿಪ್ರಾಯಪಟ್ಟರು.

ಕೊಡವ ಮಕ್ಕಡ ಕೂಟ ಅರ್ಪಿಸುವ “ಸ್ವಸ್ತಿಕ್ ಎಂಟರ್‌ಟೈನ್‌ಮೆAಟ್” ಬ್ಯಾನರಡಿ ಯಲ್ಲಿ ನಿರ್ಮಾಣವಾಗುತ್ತಿರುವ, ಕೊಡವ ಮಕ್ಕಡ ಕೂಟ ಪ್ರಕಟಿಸಿದ “ವಿಧಿರ ಕಳಿಲ್” ಕಾದಂಬರಿ ಆಧಾರಿತ, ನಟ, ನಿರ್ದೇಶಕ, ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ “ಪೊಮ್ಮಾಲೆ ಕೊಡಗ್” ಕೊಡವ ಚಲನಚಿತ್ರದ ಮುಹೂರ್ತ ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ನಡೆಯಿತು.

ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ ಅವರು, ಸಂಸ್ಕೃತಿ ಉಳಿಯುವುದು ಭಾಷೆಯ ಬೆಳವಣಿಗೆಯಿಂದ. ನಮ್ಮ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಬೇರೆಯದ್ದೇ ಪ್ರಭಾವ ಬೀರಿದರೆ ಸಂಸ್ಕಾರ ನಾಶವಾಗುವುದು ಖಚಿತ ಎಂದರು.

ಕೊಡವರು ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕವಾಗಿ ಬೆಳವಣಿಗೆ ಕಾಣುತ್ತಿದ್ದು, ಸಾಹಿತ್ಯ, ಪುಸ್ತಕ ಪ್ರಕಟಣೆಯ ಮೂಲಕ ಕೊಡವ ಭಾಷೆಯ ಅಸ್ತಿತ್ವದ ಪ್ರಯೋಗವಾಗಿದೆ. ಬೇರೆ, ಬೇರೆ ಪ್ರಕಾರಗಳ ಮೂಲಕ ಕೊಡವ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸಲು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದೀಗ ಚಲನಚಿತ್ರದ ಮೂಲಕ ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ಇದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂದರು.

ವಿಶ್ವವಿದ್ಯಾನಿಲಯಗಳಲ್ಲಿ ಕೊಡವ ಭಾಷೆಗೆ ಅವಕಾಶ ಕಲ್ಪಿಸಿದ್ದು, ಶೈಕ್ಷಣಿಕ ಮತ್ತು ಸಾಂಪ್ರದಾಯಿಕವಾಗಿ ಭಾಷೆ ಬೆಳವಣಿಗೆ ಸಾಧಿಸುತ್ತಿದೆ. ಅಲ್ಲದೆ ಕ್ರೀಡೆ, ಸಿನಿಮಾದ ಮೂಲಕ ಕೊಡವರು ಮುಂದೆ ಬರುತ್ತಿದ್ದಾರೆ. ಸಮಾಜದ ಪರಿವರ್ತನೆ, ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸಿನಿಮಾವೂ ಒಂದು ಮೂಲವಾಗಿದೆ ಎಂದು ಚಿದ್ವಿಲಾಸ್ ತಿಳಿಸಿದರು.

ಹಿಂದೂಗಳಿಗೆ ಭಾರತ ಬಿಟ್ಟರೆ ಬೇರೆ ದೇಶವಿಲ್ಲ ಎಂಬ ಮಾತು ಕೊಡವರಿಗೆ ಕೊಡಗು ಎಂಬದಕ್ಕೂ ಅನ್ವಯಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಪ್ರಸ್ತುತ ದಿನಗಳಲ್ಲಿ ಕೊಡವ ಮಕ್ಕಡ ಕೂಟದಿಂದ ವಿವಿಧ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಕೊಡವ ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವೆಂದರು.

ಚಿತ್ರ ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಮಾತನಾಡಿ, ಸಿನಿಮಾಗಳು ಸಮಾಜಕ್ಕೆ ಸ್ಫೂರ್ತಿ ತುಂಬುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ಕೊಡವರು ತಮ್ಮ ಸಂಸ್ಕೃತಿಯನ್ನು ಯಾವುದಾದರೊಂದು ರೂಪದಲ್ಲಿ ಉಳಿಸಿ ಬೆಳೆಸುವ ಪ್ರಯತ್ನ ಮಾಡಿ ಮತ್ತೊಬ್ಬರಿಗೆ ಪ್ರೇರಣೆ ನೀಡಬೇಕು ಎಂದರು.

“ಪೊಮ್ಮಾಲೆ ಕೊಡಗ್” ಚಿತ್ರ ಮಹಿಳಾ ಪ್ರಧಾನವಾಗಿದ್ದು, ಕೊಡಗಿನ ಸುಂದರತಾಣಗಳಲ್ಲಿ ಚಿತ್ರೀಕರಣ ಮಾಡಲಾಗುತ್ತದೆ ಎಂದು ಹೇಳಿದರು.

ನಿರ್ಮಾಪಕಿ ಕೊಟ್ಟುಕತ್ತೀರ ಯಶೋಧ ಕಾರ್ಯಪ್ಪ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಸಂಸ್ಕೃತಿ ಕಣ್ಮರೆಯಾಗುತ್ತಿದ್ದು, ಈ ಚಿತ್ರದ ಮೂಲಕ ಅವುಗಳನ್ನು ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಕೊಡಗಿನ ಸಂಶೋಧನೆಗೆAದು ಬಂದ ಯುವತಿಯೊಬ್ಬಳ ಸುತ್ತ ಹೆಣೆದ ಚಿತ್ರ ಇದಾಗಿದ್ದು, “ಸ್ವಸ್ತಿಕ್ ಎಂಟರ್ ಟೈನ್‌ಮೆಂಟ್” ಬ್ಯಾನರ್ ನಡಿ ರೂ.೧೫ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಹಾಗೂ ಚಿತ್ರದ ಕಾರ್ಯಕಾರಿ ನಿರ್ಮಾಪಕ ಬೊಳ್ಳಜಿರ ಬಿ.ಅಯ್ಯಪ್ಪ, ನಾಯಕ ಕೆಲೇಟಿರ ಪವಿತ್, ನಾಯಕಿ ತೀತಿರ ಸೌಮ್ಯ, ಕಲಾವಿದರಾದ ಕಾಣತಂಡ ನೇಹ, ಪುತ್ತರಿರ ಕರುಣ್ ಕಾಳಯ್ಯ, ಮೊನ್ನಂಡ ನೇಹಾ ಮೋಟಯ್ಯ, ಬೊಳ್ಳಜಿರ ಯಮುನಾ ಅಯ್ಯಪ್ಪ, ಈರಮಂಡ ವಿಜಯ್ ಉತ್ತಯ್ಯ, ಮುಕ್ಕಾಟಿರ ಅಂಜು ಸುಬ್ರಮಣಿ ಮತ್ತಿತರರು ಹಾಜರಿದ್ದರು.

ಕೊಡವ ಮಕ್ಕಡ ಕೂಟದಿಂದ ಪ್ರಕಟಗೊಂಡ "ಕೊಡಗ್‌ರ ಸಿಪಾಯಿ", "ನಾಡ ಪೆದ ಆಶಾ" ಕಾದಂಬರಿ ಕೊಡವ ಚಲನಚಿತ್ರಗಳಾಗಿ ತೆರೆ ಕಂಡಿವೆ. ಇದೀಗ “ವಿಧಿರ ಕಳಿಲ್” ಕಾದಂಬರಿ “ಪೊಮ್ಮಾಲೆ ಕೊಡಗ್” ಆಗಿ ಸೆಟ್ಟೇರಿದೆ ಎಂದು ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ತಿಳಿಸಿದರು.

ಚಿತ್ರ ತಂಡ: ಚಿತ್ರಕತೆ, ಸಂಭಾಷಣೆ, ನಿರ್ದೇಶನ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ನಿರ್ಮಾಪಕಿ ಕೊಟ್ಟುಕತ್ತೀರ ಯಶೋಧ ಕಾರ್ಯಪ್ಪ, ಸಾಹಿತ್ಯ ಆಪಾಡಂಡ ಜಗ ಮೊಣ್ಣಪ್ಪ, ನಿರ್ಮಾಣ ನಿಯಂತ್ರಕರು ಈರಮಂಡ ವಿಜಯ್ ಉತ್ತಯ್ಯ ಕಾರ್ಯನಿರ್ವಹಿಸಿದ್ದಾರೆ.

ಸಂಶೋಧನೆ, ಸಹ ಸಂಭಾಷಣೆ ಆಪಾಡಂಡ ಜಗ ಮೊಣ್ಣಪ್ಪ, ಉಳುವಂಗಡ ಕಾವೇರಿ ಉದಯ, ಬಾಚರಣಿಯಂಡ ಅಪ್ಪಣ್ಣ, ರಾಣು ಅಪ್ಪಣ್ಣ, ಛಾಯಾಗ್ರಹಣ ಶಿವಕುಮಾರ್ ಅಂಬಲಿ, ಪ್ರದೀಪ್ ಆರ್ಯನ್, ಕಾರ್ಯಕಾರಿ ನಿರ್ಮಾಪಕ ಬೊಳ್ಳಜಿರ ಬಿ.ಅಯ್ಯಪ್ಪ, ಸಹ ನಿರ್ದೇಶಕರಾಗಿ ಇತಿಹಾಸ ಶಂಕರ್ ಕಾರ್ಯ ನಿರ್ವಹಿಸಲಿದ್ದು, ವಿಠಲ್ ರಂಗದೋಳ್ ಸಂಗೀತ ನೀಡಿದ್ದಾರೆ.

ಕಲಾವಿದರು : ಚಿತ್ರದಲ್ಲಿ ನಾಯಕನಾಗಿ ಕೇಲೇಟಿರ ಪವಿತ್, ನಾಯಕಿಯಾಗಿ ತೀತಿರ ಸೌಮ್ಯ ನಟಿಸಿದ್ದು, ಕಲಾವಿದರಾಗಿ ಕಾಣತಂಡ ನೇಹ, ಬೊಳ್ಳಜಿರ ಬಿ.ಅಯ್ಯಪ್ಪ, ವಾಂಚೀರ ವಿಠಲ್ ನಾಣಯ್ಯ, ಮಂಡೀರ ಪದ್ಮ ಬೋಪಯ್ಯ, ಅಲ್ಲರಂಡ ವಿಠಲ್ ನಂಜಪ್ಪ, ಈರಮಂಡ ವಿಜಯ್ ಉತ್ತಯ್ಯ, ಈರಮಂಡ ಹರಿಣಿ ವಿಜಯ್, ಅಮ್ಮಟ್ಟಂಡ ವಿಂಧ್ಯಾ ದೇವಯ್ಯ, ಕೋಳುಮಾಡಂಡ ತಾವರೆ ಉತ್ತಪ್ಪ, ಕೋಳುಮಾಡಂಡ ಸಾಬು ಉತ್ತಪ್ಪ, ಬುಟ್ಟಂಡ ಕಸ್ಮ ಅಯ್ಯಣ್ಣ, ಮೊನ್ನಂಡ ನೇಹಾ ಮೋಟಯ್ಯ, ಪುತ್ತರಿರ ಕರುಣ್ ಕಾಳಯ್ಯ, ಅಜ್ಜಮಕ್ಕಡ ವಿನು ಕುಶಾಲಪ್ಪ, ಅಲ್‌ತ್ತಂಡ ಮಮತ ಬೋಪಣ್ಣ, ಚೋಕಂಡ ದಿನು ನಂಜಪ್ಪ, ಬೊಳ್ಳಜಿರ ಯಮುನಾ ಅಯ್ಯಪ್ಪ, ಪುಳಿಯಂಡ ಯಾಮಿನಿ, ಅಮ್ಮಟ್ಟಂಡ ದೇವಯ್ಯ, ನಂದಿನಿ ಅನಿಲ್, ಬೊಳ್ಳಜಿರ ದೇಚಮ್ಮ ಅಯ್ಯಪ್ಪ, ಮುಕ್ಕಾಟಿರ ಅಂಜು ಸುಬ್ರಮಣಿ, ಚೆರಿಯಮನೆ ಪ್ರಸಾದ್ ನಟಿಸಿದ್ದಾರೆ.