ಚೆಟ್ಟಳ್ಳಿ, ಮಾ. ೧೪: ೧೯೬೫ರ ಮರಣೋತ್ತರ ಸೇನಾಪದಕ ಪುರಸ್ಕೃತ ನಾಯಕ್ ಕೂಕಂಡ ಪೊನ್ನಪ್ಪ ಅವರ ಹೆಸರನ್ನು ಅವರ ಪೊನ್ನಂಪೇಟೆಯ ನಿವಾಸದ ಮುಂದಿರುವ ರಸ್ತೆಗೆ ನಾಮಕರಣ ಗೊಳಿಸಬೇಕೆಂದು ಅಖಿಲ ಕರ್ನಾಟಕ ಮಾಜಿ ಯೋಧರ ಸಂಘ ಕೊಡಗು ಘಟಕ ಪೊನ್ನಂಪೇಟೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದೆ.
ಪೊನ್ನಂಪೇಟೆಯ ಹಳ್ಳಿಗಟ್ಟು ಗ್ರಾಮದ ಸ್ವಾತಂತ್ರ ಹೋರಾಟಗಾರ ದಿವಂಗತ ನಂಜಪ್ಪ ಹಾಗೂ ದಿ. ಗಂಗಮ್ಮ ದಂಪತಿಯ ಹಿರಿಯಪುತ್ರರಾಗಿ ಕೂಕಂಡ ಪೊನ್ನಪ್ಪ ೧೯೩೯ರಲ್ಲಿ ಜನಿಸಿದರು.
ಪೊನ್ನಂಪೇಟೆಯಲ್ಲಿ ಶಾಲಾ ದಿನಗಳನ್ನು ಆರಂಭಿಸಿ ಉತ್ತಮ ಕ್ರೀಡಾಪಟು ಮತ್ತು ಅಥ್ಲೆಟಿಕ್ನಲ್ಲಿ ಆಸಕ್ತಿ ಇದ್ದ ಪೊನ್ನಪ್ಪ ತಮ್ಮ ೧೮ನೇ ವಯಸ್ಸಿನಲ್ಲಿ, ಅಂದರೆ ೧೯೫೭ರಲ್ಲಿ ಭಾರತೀಯ ಸೇನಾಪಡೆಯ ಮೆಡ್ರಾಸ್ ರೆಜಿಮೆಂಟ್ನ್ನು ಸೇರಿ ವೆಲ್ಲಿಂಗ್ಟನ್ನಲ್ಲಿ ತರಬೇತಿ ಪಡೆದರು. ತರಬೇತಿ ಮುಗಿಯುತ್ತಿದ್ದಂತೆ ದೇಶದಲ್ಲಿ ಪ್ರಾರಂಭವಾಗಿದ್ದ ನಾಗಲ್ಯಾಂಡ್ ಮತ್ತು ನ್ಯಾಪದ ಹೋರಾಟವನ್ನು ನಿಯಂತ್ರಿಸುವ ಕರ್ತವ್ಯದೊಂದಿಗೆ ದೇಶಸೇವೆಯ ಕಾರ್ಯಕ್ಕೆ ಮುಂದಾದ ಪೊನ್ನಪ್ಪ, ಒಂದರ ಹಿಂದೆ ಮತ್ತೊಂದರAತೆ ಬಂದ ಭಾರತ ಚೀನಾ ಯುದ್ಧದಲ್ಲಿ ಕೂಡ ತೊಡಗಿಸಿಕೊಂಡರು. ಈ ಸಂದರ್ಭ ಇವರು ಯುದ್ಧ ಭೂಮಿಯಲ್ಲಿ ಕಾಣೆಯಾದರು.
ಸುಮಾರು ಒಂದು ತಿಂಗಳುಗಳ ಕಾಲ ಅರಣ್ಯದೊಳಗೆ ದಾರಿತಪ್ಪಿ ಗೆಡ್ಡೆ ಗೆಣಸು ತಿಂದು ಬದುಕಿ ಹರಸಾಹಸದೊಂದಿಗೆ ತನ್ನ ಸೇನಾನೆಲೆಗೆ ಬಂದು ತಲುಪಿದರು. ಪುನಃ ಸೇನೆಯಲ್ಲಿ ಕೆಚ್ಚೆದೆಯಿಂದ ತಮ್ಮ ಸೇವೆಯನ್ನು ಮುಂದುವರೆಸಿದರು. ಉತ್ತಮ ಹಾಕಿಪಟು ಹಾಗೂ ಬಾಕ್ಸರ್ ಆಗಿದ್ದಂತಹ ಪೊನ್ನಪ್ಪ ಅವರು ತರಬೇತಿಯನ್ನು ಪಡೆದ ಕ್ಷಣದಿಂದಲೇ ಯುದ್ಧ ಭೂಮಿಯಲ್ಲೆ ಕಾಲ ಕಳೆಯುವಂತಾಯಿತು. ಇವರ ಕ್ರೀಡಾಸಕ್ತಿ ಮತ್ತು ಇವರ ಕಾರ್ಯದಕ್ಷತೆಯಿಂದ ನಾಯಕ್ ಹುದ್ದೆಯನ್ನು ಅಲಂಕರಿಸಿ ಪಂಜಾಬಿನ ಅಂಬಾಲದಲ್ಲಿ ಕೆಲ ಸಮಯ ಕೆಲಸದಲ್ಲಿದ್ದಾಗ ೧೯೬೫ರಲ್ಲಿ ಇಂಡೋಪಾಕ್ ಯುದ್ಧ ಪ್ರಾರಂಭವಾಯಿತು. ಪಂಜಾಬಿನಿAದಲೇ ಯುದ್ಧದ ಮುಂಚೂಣಿಯಲ್ಲಿ ತೊಡಗಿಸಿ ಕೊಂಡ ಇವರು ತಮ್ಮ ಸೇನಾಬಳಗದೊಂದಿಗೆ ಶತ್ರುಪಡೆಯನ್ನು ಸದೆಬಡಿಯುತ್ತಾ ಪಾಕಿಸ್ತಾನದೊಳಗೆ ಪ್ರವೇಶಿಸಿ ಯುದ್ಧ ಮಾಡಿದರು.
ಆದರೆ ತಾ. ೨೧.೦೯.೧೯೬೫ ರಂದು ಎರಡು ಕಡೆಗಳಿಂದ ಯುದ್ಧ ವಿರಾಮ ಘೋಷಣೆಗೊಂಡು ಯುದ್ಧದ ಗುಂಗಿನಿAದ ಹೊರಬಂದು ಅಲ್ಲೇ ವಿರಾಮವನ್ನು ಪಡೆಯುತ್ತಿರಬೇಕಾಯಿತು. ೧೯೬೫ರ ಆಗಸ್ಟ್ ೨೨ರ ಬೆಳಿಗ್ಗೆ ಹಠತ್ತಾಗಿ ಶತ್ರುದೇಶ ಸಿಡಿಸಿದ ಶೆಲ್ಲ್ ದಾಳಿಗೆ ಸಿಲುಕಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಪೊನ್ನಪ್ಪ ಹುತಾತ್ಮರಾದರು. ೧೯೫೭ ರಿಂದ ೧೯೬೫ರ ವರೆಗೆ ಸುಮಾರು ೭ ವರ್ಷಗಳ ಕಾಲ ಯುದ್ಧ ಭೂಮಿಯಲ್ಲೆ ತಮ್ಮ ಜೀವನವನ್ನು ಕಳೆದು ಭಾರತಮಾತೆಗೆ ತಮ್ಮ ಪ್ರಾಣವನ್ನು ನೀಡಿ ಕೂಕಂಡ ಕುಟುಂಬದ ಸದಸ್ಯ ದಿ. ಪೊನ್ನಪ್ಪ (ಮಣಿ) ವೀರ ಮರಣವನ್ನಪ್ಪಿ ೫೬ ವರ್ಷಗಳು ಕಳೆದಿವೆ. ೨೦೦೨ರಲ್ಲಿ ಭಾರತೀಯ ಸೇನೆಯ ಯೂನಿಟ್ನಲ್ಲಿ ವೀರಮರಣವನ್ನಪ್ಪಿದ ಯೋಧರ ಕುಟುಂಬಕ್ಕೆ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ಪೊನ್ನಪ್ಪ ಅವರ ಮರಣೋತ್ತರವಾಗಿ ಸಹೋದರ ಕೂಕಂಡ ಕಾವೇರಪ್ಪರಿಗೆ ಸೇನಾ ಮೆಡಲ್ನೀಡಿ ಗೌರವಿಸಲಾಯಿತು.
ವೀರ ಮರಣವನ್ನಪಿದ ಕೊಡಗಿನ ಸುಪುತ್ರ ದಿ. ಕೂಕಂಡ ಪೊನ್ನಪ್ಪ ಅವರ ನೆನಪುಗಳು ಶಾಶ್ವತ ಉಳಿಯುವುದರ ಜೊತೆಗೆ ಮುಂದಿನ ಪೀಳಿಗೆಗೆ ಮಾದರಿಯಾಗಲು ಕೂಕಂಡ ಪೊನ್ನಪ್ಪ ಅವರ ಮನೆ ಮುಂದಿರುವ ರಸ್ತೆಗೆ ನಾಯಕ್ ಕೂಕಂಡ ಪೊನ್ನಪ್ಪ ರಸ್ತೆ ಎಂದು ನಾಮಕರಣ ಮಾಡಬೇಕೆಂದು ಅಖಿಲ ಕರ್ನಾಟಕ ಮಾಜಿ ಯೋಧರ ಸಂಘದ ಕೊಡಗು ಘಟಕದ ಅಧ್ಯಕ್ಷ ಕೊಟ್ಟ್ಕತ್ತಿರ ಸೋಮಣ್ಣ ಒತ್ತಾಯಿಸಿದ್ದಾರೆ.
- ಪುತ್ತರಿರÀ ಕರುಣ್ಕಾಳಯ್ಯ