ಮಡಿಕೇರಿ, ಮಾ. ೧೪: ಕೊಡವ ಜನಾಂಗ ವನ್ನು ವಿಶೇಷವಾಗಿ ಆದ್ಯತೆಯೊಂದಿಗೆ ಪರಿಗಣಿಸಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ಯುಕೋ ಸಂಘಟನೆ ವತಿಯಿಂದ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನೇತೃತ್ವದಲ್ಲಿ, ಶಾಸಕರ ಭವನದಲ್ಲಿ ಸಚಿವರನ್ನು ಭೇಟಿ ಮಾಡಿ ದೇವರಾಜ ಅರಸು ಅಭಿವೃದ್ಧಿ ನಿಗಮ ಒಂದು ಸಾಗರ ಇದ್ದ ಹಾಗೆ. ಇದುವರೆಗೆ ಕೊಡವರಿಗೆ ಏನೂ ಆಗಿಲ್ಲ. ಕನಿಷ್ಟ ಒಂದು ಸದಸ್ಯ ಸ್ಥಾನವೂ ಕೊಡವರಿಗೆ ಲಬಿಸಿಲ್ಲ. ಹೀಗಿರುವಾಗ ಕೊಡವರ ಅಭಿವೃದ್ಧಿ ಅಸಾಧ್ಯ. ಘೋಷಿತ ಅನುದಾನವನ್ನು ಕೊಡವ ಅಭಿವೃದ್ಧಿ ನಿಗಮದ ಮೂಲಕವೇ ಹಂಚಲು ಅನುವು ಮಾಡಿಕೊಡುವಂತೆ ಮನವಿ ಮಾಡಿಕೊಳ್ಳಲಾಯಿತು.
ಇದುವರೆಗೆ ದೇವರಾಜ ಅರಸು ಅಭಿವೃದ್ಧಿ ನಿಗಮದಲ್ಲೇ ಇದ್ದ ಒಕ್ಕಲಿಗ, ಲಿಂಗಾಯತ, ಮರಾಠ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಸ್ಥಾಪನೆಯಾಗಿರುವಾಗ ಒಕ್ಕಲಿಗರೊಂದಿಗೆ ೩ಎ ಅಡಿಯಲ್ಲಿಯೇ ಕೊಡವರೂ ಗುರುತಿಸಿಕೊಂಡಿರುವಾಗ ಈ ಮಲತಾಯಿದೋರಣೆ ಸರಿಯಲ್ಲ. ಕೊಡವರ ಸಮಗ್ರ ಅಭಿವೃದ್ಧಿ ಆಗಬೇಕಾದರೆ ಅಭಿವೃದ್ಧಿ ನಿಗಮ ಸ್ಥಾಪನೆಯಾಗಲೇ ಬೇಕಾಗಿದೆ ಎಂದು ಮನವರಿಕೆ ಮಾಡಲಾಯಿತು.
ಮನವಿ ಸ್ವೀಕರಿಸಿ ಚರ್ಚಿಸಿದ ಸಚಿವರು, ಕೊಡವರ ಬೇಡಿಕೆಯನ್ನು ಆದ್ಯತೆಯೊಂದಿಗೆ ಪರಿಗಣಿಸಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಕುರಿತಂತೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ಕೊಡವರಿಗೆ ನಿಗಮದ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದರು.
ನಿಯೋಗದಲ್ಲಿ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಮಾದೇಟಿರ ತಿಮ್ಮಯ್ಯ ಇದ್ದರು.