ಮಡಿಕೇರಿ, ಮಾ.೧೪: ಕಾಂಗ್ರೆಸ್ ಸದಸ್ಯತ್ವ ನೋಂದಣಿ ಮಾಡುವ ಜೊತೆಯಲ್ಲೇ ಸಾರ್ವಜನಿಕರ ಅಹವಾಲನ್ನು ಆಲಿಸಿ ಅದನ್ನು ಟಿಪ್ಪಣಿ ಮಾಡಿ ಜಿಲ್ಲಾ ಸಮಿತಿಗೆ ನೀಡಬೇಕು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರಾ ಮೈನಾ ಕರೆ ನೀಡಿದರು.

ಬೆಟ್ಟಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ನಾಪಂಡ ಗಣೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸದಸ್ಯತ್ವ ನೋಂದಣಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಡಿಜಿಟಲ್ ನೋಂದಣಿ ಮೂಲಕ ಕಾಂಗ್ರೆಸ್ ಸದಸ್ಯತ್ವ ಆಂದೋಲನ ಪ್ರಾರಂಭಿಸಿದೆ. ಈ ಕಾರ್ಯ ಕೇವಲ ಸದಸ್ಯರ ಸಂಖ್ಯೆ ಹೆಚ್ಚಿಸಲು ಸೀಮಿತವಾಗಿರದೆ ನಾಗರಿಕರ ಅಭಿಪ್ರಾಯ, ಸಲಹೆ, ಸಮಸ್ಯೆಗಳ ವಿವರಗಳನ್ನು ಪಡೆದು ಅದಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸುವ ಮಹತ್ವಾಕಾಂಕ್ಷೆಯ ಕಾರ್ಯಸೂಚಿಯನ್ನು ಹೊಂದಿದೆ ಎಂದರು. ಪ್ರತಿ ಸದಸ್ಯತ್ವ ಪಡೆಯುವಾಗಲು ಅವರ ಅಹವಾಲನ್ನು ನೋಂದಣಿಗಾರರು ಪಡೆದು ಚೀಫ್ ಎನ್ರೋಲರ್‌ಗಳಿಗೆ ಲಿಖಿತವಾಗಿ ತಲುಪಿಸಬೇಕು.

ಚೀಫ್ ಎನ್ರೋಲರ್‌ಗಳು ಜಿಲ್ಲಾ ಸಮಿತಿಗೆ ಅದನ್ನು ಸಲ್ಲಿಸಿ ಜಿಲ್ಲಾ ಸಮಿತಿ ಅವುಗಳ ವರದಿಯನ್ನು ಕಾರ್ಯಾಧ್ಯಕ್ಷ ಧ್ರುವನಾರಾಯಣ್ ನೇತೃತ್ವದ ಸಮಿತಿಗೆ ಒಪ್ಪಿಸಲಿದೆ. ಈ ಮೂಲಕ ಜನರ ಬೇಕು ಬೇಡಿಕೆಗಳ ಚಿತ್ರಣ ಎಐಸಿಸಿ ಗೆ ತಲುಪಲಿದೆ ಎಂದು ಮೈನಾ ವಿವರಿಸಿದರು.

ಚೀಫ್ ಎನ್ರೋಲರ್ ಕೇಟೋಳಿ ಮೋಹನ್ ರಾಜ್ ಮಾತನಾಡಿ, ಬೆಟ್ಟಗೇರಿ ಪಂಚಾಯತ್ ವ್ಯಾಪ್ತಿಯಲ್ಲಿ ಮೂರು ಸಾವಿರ ಸದಸ್ಯರ ನೋಂದಾಯಿಸುವ ಗುರಿಯನ್ನು ಹೊಂದಿದ್ದು ನೋಂದಣಿಗಾರರು ಮತ್ತಷ್ಟು ಸಕ್ರಿಯವಾಗಿ ಕೆಲಸ ಮಾಡುವಂತೆ ಮನವಿ ಮಾಡಿದರು. ವಲಯಾಧ್ಯಕ್ಷ ನಾಪಂಡ ಗಣೇಶ್ ಮಾತನಾಡಿ, ತಾವು ಸೇರಿದಂತೆ ಎಲ್ಲಾ ವಲಯ ಪ್ರಮುಖರು ಪ್ರತಿ ಬೂತ್‌ಗಳಿಗೆ ಭೇಟಿ ನೀಡಿ ಬೂತ್ ನೋಂದಣಿಗಾರರಿಗೆ ಸಹಕರಿಸುವ ಭರವಸೆ ನೀಡಿದರು.

ಸಭೆಯಲ್ಲಿ ಕೆಪಿಸಿಸಿ ಎನ್ರೋಲರ್‌ಗಳಾದ ಕೊಡಗನ ತೀರ್ಥ ಪ್ರಸಾದ್, ಬೊಳ್ಳದಂಡ ನಾಚಪ್ಪ, ಕೆ.ಎಂ. ಶೋಭರಾಜ್, ಮಜೀದ್ ಬೆಟ್ಟಗೇರಿ, ಹ್ಯಾರಿಷ್, ನಂಬAಡ ನವೀನ್ ಸೇರಿದಂತೆ ವಲಯ ಪ್ರಮುಖರು ಉಪಸ್ಥಿತರಿದ್ದರು.