ಮಡಿಕೇರಿ, ಮಾ. ೧೫: ಕೊಡಗು ಜಿಲ್ಲಾ ಮಾಜೀ ಸೈನಿಕರ ಸಂಘದ ವತಿಯಿಂದ ಮಾಜೀ ಯೋಧರ ಸಮಸ್ಯೆಗಳು-ಬೇಕು ಬೇಡಿಕೆಗಳ ಕುರಿತಾಗಿ ಜಿಲ್ಲಾಧಿಕಾರಿ ಡಾ|| ಬಿ.ಸಿ.ಸತೀಶ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಅವರನ್ನು ಭೇಟಿಯಾಗಿ ಚರ್ಚಿಸಲಾಯಿತು. ಸಂಘದ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಬಿ.ಎ.ಕಾರ್ಯಪ್ಪ , ಕಾರ್ಯದರ್ಶಿ ಮೇಜರ್ ಒ.ಎಸ್. ಚಿಂಗಪ್ಪ ಹಾಗೂ ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ವರಿಷ್ಠಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಮಾಜೀ ಯೋಧರು, ವಿಧವೆಯರಿಗೆ ಜಾಗ ಮಂಜೂರಾತಿ ವಿಚಾರ, ಸೇರಿದಂತೆ ಇನ್ನಿತರ ಹಲವು ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಯಿತು. ಈ ಸಂದರ್ಭ ಪ್ರತಿಕ್ರಿಯಿಸಿದ ಡಾ|| ಬಿ.ಸಿ.ಸತೀಶ್ ಅವರು ಸದ್ಯದಲ್ಲಿ ಮಾಜೀ ಯೋಧರ ವಿಚಾರವಾಗಿ ಸಂಘದ ಪದಾಧಿಕಾರಿಗಳ ವಿಶೇಷ ಸಭೆ ಕರೆಯುವದಾಗಿ ಭರವಸೆ ನೀಡಿದರಲ್ಲದೆ ಈ ಸಭೆಯಲ್ಲಿ ಎಲ್ಲವನ್ನೂ ಕೂಲಂಕುಶವಾಗಿ ಚರ್ಚಿಸುವದಾಗಿ ಭರವಸೆಯಿತ್ತರು.
ಬಳಿಕ ಪದಾಧಿಕಾರಿಗಳು ನೂತನ ಪೊಲೀಸ್ ವರಿಷ್ಠಾಧಿಕಾರಿಗಳಾಗಿರುವ ಸೇನಾ ಮೂಲದವರೂ ಆದ ಎಂ.ಎ.ಅಯ್ಯಪ್ಪ ಅವರನ್ನು ಅಭಿನಂದಿಸಿ ಸಂಘದ ಕುರಿತು ವಿಚಾರ ವಿನಿಮಯ ನಡೆಸಿದರು. ಜಿಲ್ಲೆಯ ವಿವಿಧೆಡೆ ಇರುವ ಸಂಘದ ಶಾಖೆಗಳಿಗೆ ಭೇಟಿ ನೀಡುವದಾಗಿ ಈ ಸಂದರ್ಭ ಆಶ್ವಾಸನೆಯಿತ್ತರು.
ಪದಾಧಿಕಾರಿಗಳಾದ ನಿವೃತ್ತ ಕರ್ನಲ್ ಚಿಣ್ಣಪ್ಪ, ಕರ್ನಲ್ ಅಯ್ಯಪ್ಪ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇರುವ ಸಂಘದ ಅಧ್ಯಕ್ಷರುಗಳು ಈ ಸಂದರ್ಭ ಪಾಲ್ಗೊಂಡಿದ್ದರು.