ಮಡಿಕೇರಿ, ಮಾ.೧೪: ಪಟ್ಟಿಘಾಟ್ ಮೀಸಲು ಅರಣ್ಯ ವ್ಯಾಪ್ತಿಯ ಭಾಗಮಂಡಲ ಬಳಿಯ ತಣ್ಣಿಮಾನಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಹರಳು ಕಲ್ಲು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವದೆಂದು ರಾಜ್ಯ ಸಮಾಜ ಕಲ್ಯಾಣ ಇಲಾಖಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.ಕೊಡಗು ಜಿಲ್ಲೆಯ ತಣ್ಣಿಮಾನಿ ಗ್ರಾಮದ ನಿಶಾನೆ ಮೊಟ್ಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಹರಳು ಕಲ್ಲು ದಂಧೆ ನಡೆಯುತ್ತಿರುವದು ಸರಕಾರದ ಗಮನಕ್ಕೆ ಬಂದಿದೆಯೇ ಎಂದು ವಿಧಾನಪರಿಷತ್ತು ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಅವರು ಅರಣ್ಯ ಇಲಾಖಾ ಸಚಿವರಲ್ಲಿ ಪ್ರಶ್ನೆ ಮಾಡಿದ್ದರು. ಇದಕ್ಕೆ ಅರಣ್ಯ ಸಚಿವ ಉಮೇಶ್ ಕತ್ತಿ; ಈ ಬಗ್ಗೆ ಗಮನಕ್ಕೆ ಬಂದಿದೆ, ಅಕ್ರಮ ಗಣಿಗಾರಿಕೆ ತಡೆಯಲು ಸಿಸಿ ಟಿವಿ ಕ್ಯಾಮರಾ ಅಳವಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಕಾನೂನಿನಡಿಯಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳ ಲಾಗಿದ್ದು, ಓರ್ವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಉಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದು, ತನಿಖಾ ತಂಡ ರಚಿಸಲಾಗಿದೆ. ಅಕ್ರಮ ಗಣಿಗಾರಿಕೆಯನ್ನು ನಿಷೇಧಿಸಲಾಗಿದ್ದು, ಸಂಪೂರ್ಣವಾಗಿ ನಿಲ್ಲಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರಿಸಿದ್ದರು. ಈ ವಿಚಾರಕ್ಕೆ ಸಂಬAಧಿಸಿದAತೆ ಸದನದಲ್ಲಿಂದು ಚುಕ್ಕೆ ಗುರುತಿನ ಪ್ರಶ್ನೆಯಡಿ ಮಾತನಾಡಲು ಅವಕಾಶ ದೊರೆತ್ತಿದ್ದು, ವೀಣಾ ಅವರು ವಿಷಯ ಪ್ರಸ್ತಾಪಿಸಿದರು. ಅಕ್ರಮ ಹರಳು ಕಲ್ಲು ಗಣಿಕಾರಿಕೆಗೆ ಸಂಬAಧಿಸಿದAತೆ ಅರಣ್ಯ ಸಚಿವರು ಉತ್ತರ ಕೊಟ್ಟಿದ್ದಾರೆ. ಆದರೆ ಈ ದಂಧೆಗೆ ಶಾಶ್ವತ ಕಡಿವಾಣ ಹಾಕಬೇಕಿದೆ. ಅರಣ್ಯದಲ್ಲಿ ಸ್ವಂತ ಉಪಯೋಗಕ್ಕೆ ಒಂದು ಮರ ಕಡಿದರೂ ಅವರ ಮೇಲೆ ಕ್ರಮಕೈಗೊಳ್ಳಲಾ ಗುತ್ತದೆ. ಆದರೆ, ಇಲ್ಲಿ ಕಳೆದ ೧೫ ವರ್ಷಗಳಿಂದ ನಿರಂತರ ಅಕ್ರಮ ಗಣಿಗಾರಿಕೆ ನಡೆಯು ತ್ತಿದ್ದರೂ ಇದುವರೆಗೆ ಯಾವದೇ ಕಾನೂನು ಕ್ರಮ ಕೈಗೊಂಡಿರುವದಿಲ್ಲ. ಅಲ್ಲದೆ, ಬೆಟ್ಟವನ್ನು ಕೊರೆದು ಗಣಿಗಾರಿಕೆ ಮಾಡಲಾಗುತ್ತಿದೆ. ಇದು ಅಪಾಯಕಾರಿ ಕೂಡ, ೨೦೧೮ರಿಂದೀಚೆಗೆ ಬೆಟ್ಟದಲ್ಲಿ ನಡೆದಂತಹ ದುರಂತಗಳನ್ನು ಗಮನಿಸಿದ್ದೇವೆ, ಹಾಗೇ ಆಗುವದು ಬೇಡ. ಈ ದಂಧೆಯ ಬಗ್ಗೆ ಸಿಒಡಿ ತನಿಖೆ ಮಾಡಬೇಕೆಂದು ಸ್ಥಳೀಯ ಶಾಸಕರು ಕೂಡ ಒತ್ತಾಯ ಮಾಡಿದ್ದಾರೆ. ಹಾಗಾಗಿ ದಂಧೆಯಲ್ಲಿ ಭಾಗಿಯಾಗಿರುವವರು ಎಷ್ಟೇ ಪ್ರಭಾವಿಗಳಿದ್ದರೂ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯ ಮಾಡಿದರು.
ಅರಣ್ಯ ಸಚಿವರ ಅನುಪಸ್ಥಿತಿಯಲ್ಲಿ ಪ್ರತಿಕ್ರಿಯೆ ನೀಡಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಿಶಾನೆ ಮೊಟ್ಟೆಯಲ್ಲಿ ಮೀಸಲು ಅರಣ್ಯದಲ್ಲಿ ಆರು ಅಡಿ ಅಗಲದ ಸುಮಾರು ೮-೧೦ಅಡಿ ಆಳದ ಹೊಂಡ ಕೊರೆದು ಕೆಂಪು ಹರಳು ಕಲ್ಲು ಗಣಿಗಾರಿಕೆ ಮಾಡಲಾಗುತ್ತಿತ್ತು.
(ಮೊದಲ ಪುಟದಿಂದ) ಇದು ಗಮನಕ್ಕೆ ಬಂದ ಕೂಡಲೇ ಅರಣ್ಯ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ಮಾಡಿದ ಬಳಿಕ ಕರ್ತವ್ಯ ನಿರ್ಲಕ್ಷö್ಯಕ್ಕಾಗಿ ಓರ್ವ ಉಪ ವಲಯ ಅರಣ್ಯಾಧಿಕಾರಿ ಮತ್ತು ಓರ್ವ ಅರಣ್ಯ ರಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.
ಅಲ್ಲದೆ, ಪ್ರಕರಣಕ್ಕೆ ಸಂಬAಧಿಸಿ ದಂತೆ ತಾ.೪-೧-೨೦೨೨ರಂದು ಮೊಕದ್ದಮೆ ದಾಖಲಿಸಲಾಗಿದ್ದು, ನಾಲ್ವರು ಆರೋಪಿಗಳ ಹೆಸರುಗಳು ಕೇಳಿ ಬಂದಿವೆ. ಅವರುಗಳು ಈಗಾಗಲೇ ಜಾಮೀನು ಪಡೆದುಕೊಂಡಿದ್ದಾರೆ. ಕಾನೂನು ಕ್ರಮ ಕೈಗೊಳ್ಳುವದರಲ್ಲಿ ಯಾವದೇ ಗೊಂದಲ ಬೇಡ, ಆರೋಪಿಗಳು ಯಾರೇ ಆಗಿದ್ದರೂ ಬಂಧಿಸಿ ಕ್ರಮ ಕೈಗೊಳ್ಳಲಾಗುವದು. ಹರಳುಕಲ್ಲು ಇರುವ ಸ್ಥಳದಲ್ಲಿ ಬೇಲಿ ನಿರ್ಮಿಸಿ, ಸಿಸಿ ಕ್ಯಾಮರಾ ಅಳವಡಿಸಲಾಗುವದು ಎಂದು ಹೇಳಿದರು.
ಮತ್ತೆ ಮಾತನಾಡಿದ ವೀಣಾ ಅವರು, ಕೇವಲ ನಿಶಾನೆ ಮೊಟ್ಟೆ ಮಾತ್ರವಲ್ಲ, ಕಡಮಕಲ್ಲು, ಎರಡನೇ ಮೊಣ್ಣಂಗೇರಿ, ಬಿಳಿಗೇರಿ ಮುಂತಾದೆಡೆಗಳಲ್ಲೂ ಹರಳು ಕಲ್ಲು ದಂಧೆ ನಡೆಯುತ್ತಿದ್ದು, ಈ ಬಗ್ಗೆಯೂ ಗಮನ ಹರಿಸಬೇಕೆಂದು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಸಚಿವರು; ನಿಖರವಾಗಿ ಎಲ್ಲೆಲ್ಲಿ ಹರಳು ಕಲ್ಲುಗಳಿವೆಯೋ ಅಲ್ಲೆಲ್ಲ ಸೂಕ್ತ ಕ್ರಮ ಕೈಗೊಳ್ಳುವದಾಗಿ ಹೇಳಿದರು.