ಕಣಿವೆ, ಮಾ. ೧೪: ಹಾರಂಗಿ ಜಲಾಶಯದ ಮುಂಬದಿಯ ಅಣತಿ ದೂರದ ಬೆಂಡೆಬೆಟ್ಟ ಅರಣ್ಯ ಪ್ರದೇಶದೊಳಗೊಂದು ಬೆಂಡೆಬೆಟ್ಟ ಗಿರಿಜನ ಹಾಡಿ ಎಂಬ ಜನವಸತಿ ಪ್ರದೇಶವೊಂದಿದ್ದು ಸರ್ಕಾರದ ಸೌಲಭ್ಯಗಳಿಂದ ವಂಚಿತಗೊAಡಿದೆ. ಅಂದರೆ ಈ ಹಾಡಿಯಲ್ಲಿ ವಾಸವಿರುವ ಕೆಲವು ನಿವಾಸಿಗಳಿಗೆ ಹೊರತುಪಡಿಸಿ ಹಲವು ನಿವಾಸಿಗಳಿಗೆ ಸರ್ಕಾರ ಇದೂವರೆಗೂ ಹಕ್ಕುಪತ್ರಗಳನ್ನು ನೀಡಿಲ್ಲ. ಹಾಗಾಗಿ ಇಲ್ಲಿನ ನಿವಾಸಿಗಳು ಅಂದಿನಿAದ ಇಂದಿನತನಕವೂ ಸರ್ಕಾರದ ಮೂಲಸೌಲಭ್ಯಗಳನ್ನು ಹೊಂದಿಕೊಳ್ಳುವಲ್ಲಿ ಸಾಧ್ಯವಾಗಿಲ್ಲ. ಈ ಹಾಡಿಯಲ್ಲಿ ೨೩ ಕ್ಕೂ ಹೆಚ್ಚಿನ ಗಿರಿಜನ ಕುಟುಂಬಗಳು ಅರಣ್ಯದೊಳಗೆ ಬದುಕು ಕಟ್ಟಿಕೊಂಡಿವೆ. ಈ ೨೩ ರ ಪೈಕಿ ಕೇವಲ ೧೦ ಮಂದಿಗೆ ಸರ್ಕಾರ ತಲಾ ಎರಡು ಎಕರೆ ಅರಣ್ಯದೊಳಗಿನ ಭೂಮಿಯನ್ನು ಕೃಷಿ ಉದ್ದೇಶಕ್ಕೆ ನೀಡಿ ಹಕ್ಕು ಪತ್ರ ವಿತರಿಸಿದೆ. ಹಾಗೆಯೇ ಈ ಹತ್ತು ಮಂದಿಗೆ ಕಳೆದ ಹತ್ತು ವರ್ಷಗಳ ಮೊದಲು ಸಣ್ಣದಾದ ಮನೆಯನ್ನೂ ಕೂಡ ಕಟ್ಟಿಸಿಕೊಟ್ಟಿತ್ತು. ಕಟ್ಟಿದ ಕೇವಲ ಹತ್ತಾರು ವರ್ಷಗಳಿಗೆ ಇಲ್ಲಿನ ಮನೆಗಳು ಶಿಥಿಲಾವಸ್ಥೆ ತಲುಪಿವೆ.

ಇನ್ನೂ ಹಕ್ಕು ಪತ್ರಗಳೇ ಸಿಗದ ಇಲ್ಲಿನ ೧೩ ಗಿರಿಜನ ಕುಟುಂಬಗಳು ಸರ್ಕಾರದ ಸೌಲಭ್ಯಗಳನ್ನು ಹೊಂದಲು ಹಕ್ಕುಪತ್ರಗಳಿಗಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದರೂ ಕೂಡ ಇದೂವರೆಗೂ ವಿತರಿಸಿಯೇ ಇಲ್ಲ. ಇನ್ನು ಕೃಷಿ ಭೂಮಿ ಕೈಗೆಟುಕದ ಗಗನ ಕುಸುಮವಾಗಿದೆ.

ಹಾಡಿಗೆ ಸಮೀಪದ ದೊಡ್ಡತ್ತೂರು ಎಂಬ ಗ್ರಾಮದ ಹೆಸರಿನ ಸರ್ವೆ ನಂಬರ್ ೨೯ ರಲ್ಲಿ ೧೦೬ ಎಕರೆ ಅರಣ್ಯ ಭೂಮಿಯನ್ನು ‘‘ಅರಣ್ಯ ಹಕ್ಕು- ಯೋಜನೆ’’ ಯಡಿ ಕಂದಾಯ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಂಡು ಅರಣ್ಯದೊಳಗಿನ ಹರಕು-ಮುರುಕು ಗುಡಿಸಲಲ್ಲಿ ಜೀವನ ಸವೆಸುತ್ತಿರುವ ಆದಿವಾಸಿಗಳಿಗೆ ವಿತರಿಸಬೇಕಿತ್ತಾದರೂ ಇದುವರೆಗೂ ಸರ್ಕಾರ ಏಕೆ ಮೀನಾ ಮೇಷ ಎಣಿಸುತ್ತಿದೆ ಎಂಬುದು ಬೆಂಡೆಬೆಟ್ಟ ಹಾಡಿಯ ಅಧ್ಯಕ್ಷ ಹರೀಶ್ ಎಂಬವರ ಪ್ರಶ್ನೆ ?

ಅರಣ್ಯ ಹಕ್ಕು ಯೋಜನೆಯಡಿ ಅರಣ್ಯದಲ್ಲಿ ತಲಾ ತಲಾಂತರಗಳಿAದ ವಾಸಿಸುತ್ತಿರುವ ನಿವಾಸಿಗಳಿಗೆ ಕನಿಷ್ಟ ಎರಡು ಎಕರೆಗಳಿಂದ ಗರಿಷ್ಠ ಹತ್ತು ಎಕರೆ ವರೆಗೂ ಕೃಷಿ ಭೂಮಿಯನ್ನು ಒದಗಿಸಬೇಕೆಂಬ ನಿಯಮವಿದೆ. ಆದರೆ ಇಲ್ಲಿನ ವಾಸಿಗಳಾದ ಅರ್ಜುನ, ಚಂದ್ರ, ರಾಜು, ಅಣ್ಣಯ್ಯ, ಚಂದ್ರ, ರಾಣಿ, ತಮ್ಮು, ಪುಟ್ಟಮ್ಮ ಮೊದಲಾದ ೧೦ ಮಂದಿಗೆ ತಲಾ ಎರಡು ಎಕರೆ ಕೃಷಿ ಭೂಮಿಯನ್ನು ನೀಡಿದೆ. ಆದರೆ ಉಳಿದ ೧೩ ಕುಟುಂಬಗಳಿಗೆ ಕೃಷಿ ಭೂಮಿ ನೀಡಲು ಸರ್ಕಾರ ಏಕೆ ವಿಳಂಬಮಾಡುತ್ತಿದೆ ? ಈ ಕುಟುಂಬಗಳು ಏನು ಅನ್ಯಾಯ ಮಾಡಿವೆ ಎಂದು ಹಾಡಿಯ ಅಧ್ಯಕ್ಷ ಹರೀಶ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಇಲ್ಲಿಯೇ ನಮ್ಮ ಪೂರ್ವಜರು ಬದುಕು ಕಟ್ಟಿದ ಬಗ್ಗೆ ನಮ್ಮಲ್ಲಿ ಇರುವ ಎಲ್ಲಾ ಕುರುಹುಗಳನ್ನು ಸರ್ಕಾರಕ್ಕೆ ಒದಗಿಸಿದ್ದೇವೆ. ಹಕ್ಕು ಪತ್ರ ಕೊಡಲು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಗಿರಿಜನರಿಗೆ ಮೀಸಲಿಟ್ಟ ಜಾಗ ನಮ್ಮದು ಎಂದು ಅರಣ್ಯ ಇಲಾಖೆ ಹೇಳುತ್ತಲೇ ಹತ್ತಾರು ವರ್ಷಗಳಿಂದ ಕಾಲ ಕಳೆದಾಯಿತು. ಇನ್ನಾದರೂ ನಮಗೆ ನಮ್ಮ ಜಾಗ ಕೊಟ್ಟು ಹಕ್ಕು ಪತ್ರ ಕೊಡಿ ಎಂಬುದು ಹಾಡಿಯ ಹಿರಿಯ ನಿವಾಸಿ ಅರ್ಜುನ ಅವರ ಆಗ್ರಹವಾಗಿದೆ.

ಹಾರಂಗಿ ಮುಖ್ಯ ರಸ್ತೆಯಿಂದ ನಮ್ಮ ಜನವಸತಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಮಕ್ಕಳು ಹಾಗೂ ಮಹಿಳೆಯರು ನಿಸ್ಸಂದೇಹವಾಗಿ ಓಡಾಡುವಂತೆ ಮಾಡಬೇಕು. ಬೆಂಡೆ ಬೆಟ್ಟ ಹಾಡಿಯಲ್ಲಿ ಸಮುದಾಯದ ನಿವಾಸಿಗಳಿಗೆ ಅನುಕೂಲವಾಗುವಂತೆ ಸಮುದಾಯ ಭವನ ನಿರ್ಮಿಸಿಕೊಡಬೇಕು. ಹಾಗೆಯೇ ಹಾಡಿಯಲ್ಲಿಯೇ ಅಂಗನವಾಡಿ ಕೇಂದ್ರ ತೆರೆಯಬೇಕು ಎಂದು ವಾಸಿಗಳಾದ ಹರೀಶ, ಪ್ರಮೀಳ, ವಿನುತ, ಗಣೇಶ, ಬಿಂದು, ರವಿ ಮೊದಲಾದವರು ಆಗ್ರಹಿಸಿದ್ದಾರೆ.

ಬೆಂಡೆಬೆಟ್ಟ ಹಾಡಿಯಲ್ಲಿ ನಮಗೆ ಮಾಹಿತಿ ಇರುವಂತೆ ಮೂರ್ನಾಲ್ಕು ತಲೆಮಾರುಗಳಿಂದ ಗಿರಿಜನರು ಬದುಕು ಕಟ್ಟಿದ್ದಾರೆ. ಈಗಲಾದರು ಈ ಮಂದಿಗೆ ಹಕ್ಕುಪತ್ರ ಕೊಟ್ಟು ಸರ್ಕಾರದ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳ ಬೇಕೆಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಡಿ.ಎಸ್ ಗಣೇಶ್ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

- ಕೆ.ಎಸ್.ಮೂರ್ತಿ , ಕುಶಾಲನಗರ.