ಸೋಮವಾರಪೇಟೆ, ಮಾ. ೧೩: ಈ ಹಿಂದೆ ಅಡುಗೆ ಮನೆಗೆ ಮೀಸಲಾಗಿದ್ದ ಮಹಿಳೆಯರು ಇಂದು ಎಲ್ಲಾ ರಂಗದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಆದರೂ ಸಮಾಜದ ಮುಖ್ಯ ವಾಹಿನಿಯಿಂದ ದೂರ ಉಳಿದ ಅಸಂಖ್ಯಾತ ಮಹಿಳೆಯರಿದ್ದು ಇವರುಗಳನ್ನು ಜಾಗೃತಿ ಹಾಗೂ ಸಂಘಟನೆಯ ಮೂಲಕ ಸಮಾಜದ ಮುಖ್ಯ ಭೂಮಿಕೆಗೆ ತರುವ ಕಾರ್ಯ ಆಗಬೇಕಿದೆ ಎಂದು ಹಿರಿಯ ಸಾಹಿತಿ ಜಲಾ ಕಾಳಪ್ಪ ಅಭಿಪ್ರಾಯಿಸಿದರು.

ಇಲ್ಲಿನ ಸೃಷ್ಟಿಯ ಚಿಗುರು ಕವಿ ಬಳಗದ ವತಿಯಿಂದ ಸ್ಥಳೀಯ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳೆಯರು ಅಬಲೆಯರಲ್ಲ; ಸಬಲೆಯರು ಎಂಬುದನ್ನು ನಿರೂಪಿಸಲಾಗುತ್ತಿದೆ. ಎಲ್ಲಾ ರಂಗದಲ್ಲೂ ಮಹಿಳೆಯರು ತಮ್ಮ ಸಾಧನೆ ತೋರುತ್ತಿದ್ದಾರೆ. ಸಂಘಟನೆಗಳ ಮೂಲಕ ಅನ್ಯಾಯದ ವಿರುದ್ಧ ಧ್ವನಿ ಮೊಳಗಿಸುತ್ತಿದ್ದಾರೆ. ಹೀಗಿದ್ದರೂ ಸಹ ಮಹಿಳಾ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದು ದುರಂತ ಎಂದು ವಿಷಾಧಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಹಿಳಾ ಸಮಾಜ ಅಧ್ಯಕ್ಷೆ ಸುಮಾ ಸುದೀಪ್ ಮಾತನಾಡಿ, ಮಹಿಳೆಯರು ಇನ್ನಷ್ಟು ಸಂಘಟಿತರಾಗಬೇಕು. ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿಯೂ ಆಸಕ್ತಿ ತೋರಬೇಕು. ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸೃಷ್ಟಿಯ ಚಿಗುರು ಕವಿ ಬಳಗದ ಅಧ್ಯಕ್ಷ ಕೆ.ಪಿ. ಸುದರ್ಶನ್, ಪದಾಧಿಕಾರಿಗಳಾದ ನ.ಲ. ವಿಜಯ, ಕೆ.ಎನ್. ದೀಪಕ್, ಎಸ್.ಎ. ಮುರಳೀಧರ್, ಜವರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.