ಸೋಮವಾರಪೇಟೆ, ಮಾ. ೧೩: ರಾಜ್ಯ ಸರ್ಕಾರವು ಆಡಳಿತವನ್ನು ಸುಲಲಿತಗೊಳಿಸಿ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿನೂತನ ಯೋಜನೆಗಳನ್ನು ಜಾರಿಗೆ ತಂದಿದ್ದು, ಸಾರ್ವಜನಿಕರು ಇವುಗಳ ಪ್ರಯೋಜನ ಪಡೆಯಬೇಕೆಂದು ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.
ಕಂದಾಯ ಇಲಾಖೆ ಮೂಲಕ ಕುಂಬೂರು ಗ್ರಾಮದಲ್ಲಿ ಆಯೋಜಿಸಿದ್ದ ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನಸಾಮಾನ್ಯರು ತಮ್ಮ ಜಾಗಕ್ಕೆ ಸಂಬAಧಿಸಿದ ದಾಖಲೆಗಳಿಗಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ, ಹೊಸ ಯೋಜನೆ ಜಾರಿಗೊಳಿಸಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳೇ ಸರ್ಕಾರಿ ದಾಖಲೆಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ ಎಂದರು.
ಸೋಮವಾರಪೇಟೆ ತಾಲೂಕಿನಲ್ಲಿ ೩೬ ಸಾವಿರ ಮಂದಿಗೆ ಈ ಯೋಜನೆಯ ಮೂಲಕ ದಾಖಲೆಗಳನ್ನು ನೀಡಲಾಗುತ್ತಿದೆ. ಆರ್ಟಿಸಿ, ಜಾತಿ ದೃಢೀಕರಣ ಪತ್ರ ಹಾಗೂ ತಮ್ಮ ಜಾಗದ ನಕಾಶೆಗಳನ್ನು ಖುದ್ದು ಅಧಿಕಾರಿಗಳೇ ಉಚಿತವಾಗಿ ಮನೆ ಬಾಗಿಲಿಗೆ ತಂದು ವಿತರಿಸಲಿದ್ದಾರೆ. ಕುಂಬೂರು ಗ್ರಾಮ ವ್ಯಾಪ್ತಿಯಲ್ಲಿ ೩೬ ಮಂದಿಗೆ ಸಂಬAಧಿಸಿದ ದಾಖಲೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ರಂಜನ್ ಹೇಳಿದರು.
ದೂರದ ಊರುಗಳಿಂದ ಆಗಮಿಸಿ ಸರ್ಕಾರಿ ದಾಖಲೆಗಳಿಗಾಗಿ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಆರ್ಟಿಸಿ ಸೇರಿದಂತೆ ಇತರ ದಾಖಲೆಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ಶಾಸಕರು ಮನವಿ ಮಾಡಿದರು.
ಈ ಸಂದರ್ಭ ತಾಲೂಕು ತಹಶಿಲ್ದಾರ್ ಗೋವಿಂದರಾಜು, ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರೂಪ ಹರೀಶ್, ಸದಸ್ಯರಾದ ಶೀಲಾ ಮಣಿ, ಮಾನಸ, ದಮಯಂತಿ, ಜರ್ಮಿ, ಶಿರಸ್ತೇದಾರ್ ಲೋಹಿತ್, ಸತೀಶ್, ಕಂದಾಯ ಪರಿವೀಕ್ಷಕ ಪ್ರಹ್ಲಾದ್, ಗ್ರಾಮ ಲೆಕ್ಕಿಗರಾದ ಚಂದನ, ದೀಪಿಕ, ಗ್ರಾಮ ಸಹಾಯಕ ರುದ್ರ, ಗಿರೀಶ್, ರೋಷನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕುಂಬೂರು ಗ್ರಾಮದ ವಿವಿಧ ಫಲಾನುಭವಿಗಳ ಮನೆಗೆ ಅಧಿಕಾರಿಗಳೊಂದಿಗೆ ತೆರಳಿದ ಶಾಸಕರು, ದಾಖಲೆಗಳನ್ನು ವಿತರಣೆ ಮಾಡಿದರು.