ಮಡಿಕೇರಿ, ಮಾ. ೧೪: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಅಂಗನವಾಡಿಗಳ ಅಭಿವೃದ್ಧಿಗಾಗಿ ಕೇಂದ್ರ, ರಾಜ್ಯ ಸರಕಾರ ಮಹತ್ತರ ಯೋಜನೆಗಳನ್ನು ರೂಪಿಸಿ ಪುಟಾಣಿಗಳಿಗೆ ಕಲಿಕೆಯತ್ತ ಆಸಕ್ತಿ ನೀಡುತ್ತಿದ್ದು , ಈ ಯೋಜನೆಯು ಮಡಿಕೇರಿ ಕಾನ್ವೆಂಟ್ ಜಂಕ್ಷನ್‌ನಲ್ಲಿರುವ ಅಂಗನವಾಡಿಗೆ ತಲುಪದೆ ಕೇಂದ್ರ ಸಂಪೂರ್ಣ ದುಸ್ಥಿತಿಯಲ್ಲಿದೆ.

ಜಿಲ್ಲೆಯ ಹಲವು ಅಂಗನವಾಡಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಪುಟಾಣಿಗಳನ್ನು ತೊಡಗಿಸುವಂತೆ ಮಾಡಿ ಸೃಜನಾತ್ಮಕ ಕಲಿಕೆಗೆ ಒತ್ತು ನೀಡುತ್ತಿವೆ. ಪೋಷಣ್ ಮಾಸಾಚರಣೆ ಯೋಜನೆಯ ಮೂಲಕ ಮಕ್ಕಳಿಗೆ ಪೌಷ್ಠಿಕಾಂಶ ಆಹಾರ ಕೂಡ ಒದಗಿಸಲಾಗುತ್ತಿದೆ. ಆದರೆ ಈ ಅಂಗನವಾಡಿ ಕೇಂದ್ರದಲ್ಲಿ ಪಠ್ಯ ಚಟುವಟಿಕೆಗಳೂ ಸರಿ ನಡೆಯುತ್ತಿಲ್ಲ ಎಂಬುದು ಕಾಣಬಹುದಾಗಿದೆ.

‘ನನಗೆ ಓದು-ಬರಹ ಬರಲ್ಲ, ಆದರೆ, ನನ್ನ ಮೊಮ್ಮಗ ಈ ಅಂಗನವಾಡಿಯಲ್ಲಿ ಏನೂ ಕಲಿಯುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ’ ಎಂದು ಒಬ್ಬಾಕೆ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

(ಮೊದಲ ಪುಟದಿಂದ) ಶಾಲೆಯ ಗೋಡೆಗಳೆಲ್ಲ ಪಾಚಿ ಹಿಡಿದಿದ್ದು, ಕಳೆದ ನವೆಂಬರ್‌ನ ‘ಹ್ಯಾಪಿ ಚಿಲ್ಡೆçನ್ಸ್ ಡೇ’ ಎಂಬ ಸಂದೇಶವು ಇನ್ನೂ ‘ಪ್ರಾಣಿಗಳ’ ಚಾರ್ಟ್ ಮೇಲೆಯೇ ಉಳಿದಿದ್ದು ಆಡಳಿತದ ನಿರ್ಲಕ್ಷ ಎದ್ದು ಕಾಣುತ್ತಿದೆ.

ಮಕ್ಕಳ ಕಲಿಕೆಗೆ ಅಗತ್ಯವಿರುವ ಕಪ್ಪು ಹಲಗೆ ಅಥವಾ ‘ಸ್ಲೇಟ್’ ಕೂಡ ಈ ಅಂಗನವಾಡಿಯಲ್ಲಿ ನೆಲೆ ಕಾಣದಿರುವುದು, ಪಾಠವೇ ಇಲ್ಲದ ಕೇವಲ ಕಾಲಾಹರಣದ ಅಂಗನವಾಡಿ ಯಾಗಿದೆ.

ಬಯಲು ಶೌಚ

ಕೇಂದ್ರ ಸರಕಾರದ ಸ್ವಚ್ಛ ಭಾರತ ಕನಸ್ಸಿನಡಿಯಲ್ಲಿ ಬಯಲು ಶೌಚ ಮುಕ್ತ ಎಂಬ ಧ್ಯೇಯದೊಂದಿಗೆ ಶೌಚಾಲಯ ನಿರ್ಮಾಣಕ್ಕೆ ಇಡೀ ರಾಷ್ಟçದಲ್ಲಿಯೇ ಒತ್ತು ನೀಡಲಾಗುತ್ತಿದ್ದರೆ, ಇಲ್ಲಿ ಬಯಲಿನಲ್ಲಿ ಮಲ, ಮೂತ್ರ ವಿಸರ್ಜನೆಗೆ ಪ್ರೋತ್ಸಾಹಿಸಲಾಗುತ್ತಿದೆ – ಕಾರಣ ಶೌಚಗೃಹದಲ್ಲಿ ಗುಂಡಿ ಇದೆಯಾದರೂ ಶೌಚಾಲಯದ ಹೊರಭಾಗದಲ್ಲಿನ ಸೀವೇಜ್ ಟ್ಯಾಂಕ್ ದುಸ್ಥಿತಿಯಲ್ಲಿದೆ. ಇಲ್ಲಿಗೆ ತೆರಳಿದರೆ ಮಕ್ಕಳು ಬಿದ್ದು ಗಾಯಗಳೇನಾದರು ಆದರೆ ಎಂಬ ಕಾಳಜಿಯಿಂದ ಹೊರಗಡೆಯೇ ಮಲ, ಮೂತ್ರ ವಿಸರ್ಜನೆ ಮಾಡುವಂತೆ ಸೂಚಿಸಲಾಗುತ್ತಿದೆ.

ಆರ್ಥಿಕವಾಗಿ ಹಿಂದುಳಿದವರ ಮಕ್ಕಳೇ ಹೆಚ್ಚಾಗಿ ಈ ಅಂಗನವಾಡಿಗೆ ಬರುತ್ತಿದ್ದು, ಕಲಿಕೆಯ ಹಾದಿ ತಪ್ಪುತ್ತಿದೆ.

-ಪ್ರಜ್ಞಾ ಜಿ.ಆರ್.