ಸೋಮವಾರಪೇಟೆ, ಮಾ.೧೩ : ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದಿAದ ಕೊಡಗಿನಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ರೂ. ೨ಕೋಟಿ ಅನುದಾನ ಮೀಸಲಿಡಲು ಕ್ರಮ ವಹಿಸಲಾಗಿದೆ. ಇದರೊಂದಿಗೆ ಸಮುದಾಯ ಭವನಗಳಿಗೆ ಅನುದಾನ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಹೇಳಿದರು. ಸಮೀಪದ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯ ವತಿಯಿಂದ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಈ ಹಿಂದೆ ಒಕ್ಕಲಿಗರ ಸಂಘದಲ್ಲಿ ಅವ್ಯವಹಾರದ ಆರೋಪಗಳಿತ್ತು. ಇದೀಗ ಉತ್ತಮ ತಂಡವು ಆಡಳಿತದಲ್ಲಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ. ಸಮುದಾಯದ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಒಕ್ಕಲಿಗರ ಸಂಘದಿAದ ನಡೆಸಲ್ಪಡುವ ಆಸ್ಪತ್ರೆಗಳಲ್ಲೂ ಆಡಳಿತ ಸುಧಾರಣೆಯಾಗಿದ್ದು, ಗುಣಮಟ್ಟದ ಚಿಕಿತ್ಸೆ ಲಭಿಸುತ್ತಿದೆ ಎಂದರು.
ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್ ಜ್ಞಾನ ಅತೀ ಅವಶ್ಯವಾಗಿದ್ದು, ಇದನ್ನು ಮನಗಂಡು ಗುಡ್ಡಗಾಡು ಪ್ರದೇಶವಾಗಿರುವ ಶಾಂತಳ್ಳಿಯAತಹ ಗ್ರಾಮದಲ್ಲಿ ಆಂಗ್ಲಮಾಧ್ಯಮ ಶಾಲೆ ಸ್ಥಾಪಿಸಲಾಗಿದೆ. ಶಾಲೆಯ ಉಳಿವಿಗೆ ಪೋಷಕರು ಹೆಚ್ಚಿನ ಸಹಕಾರ ನೀಡಬೇಕು. ಶಾಲಾ ಕಟ್ಟಡ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ರೂ. ೧ಲಕ್ಷ ಧನ ಸಹಾಯ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಶಾಂತಳ್ಳಿಯಲ್ಲಿ ೨೫ ಲಕ್ಷ ನೆರವು ಒದಗಿಸಿ ಆಂಗ್ಲಮಾಧ್ಯಮ ಶಾಲೆ ಸ್ಥಾಪನೆಗೆ ಕಾರಣಕರ್ತರಾದ ರವೀಂದ್ರ ಅವರಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಸನ್ಮಾನಿಸಿರುವುದು ಶ್ಲಾಘನೀಯ. ಸಮಾಜ ಸೇವಕರನ್ನು ಸಮಾಜವೇ ಗೌರವಿಸಬೇಕು ಎಂದರು.
ಶಾಲಾಡಳಿತ ಮಂಡಳಿ ಅಧ್ಯಕ್ಷ ಕೆ.ಕೆ. ಗೋಪಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೂ
(ಮೊದಲ ಪುಟದಿಂದ) ಆಂಗ್ಲ ಮಾಧ್ಯಮ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಶ್ರೀಕುಮಾರಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯನ್ನು ಸ್ಥಾಪಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶಾಲಾಡಳಿತ ಮಂಡಳಿಯ ಪದಾಧಿಕಾರಿಗಳಾದ ವೀರಪ್ಪ, ಬಿ.ಎಲ್. ಮುತ್ತಣ್ಣ, ಸುಕನ್ಯ, ಮಂಜುನಾಥ್, ಪರಮೇಶ್ವರ್ , ಕಿಶನ್, ಮುತ್ತಣ್ಣ ಕಾರ್ಯಪ್ಪ, ಸಂಪತ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶಿವಾನಂದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕುಮಾರಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.