ಮಡಿಕೇರಿ, ಮಾ. ೧೩: ವೈಲ್ಡ್ ಮಾಸ್ರ‍್ಸ್ ಕೊಡಗು ಇವರ ವತಿಯಿಂದ ಏ. ೭ ರಿಂದ ೨೧ ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ಮುಕ್ತ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ವೈಲ್ಡ್ ಮಾಸ್ರ‍್ಸ್ ಅಧ್ಯಕ್ಷ ರವಿಕಿರಣ್, ಸಹ ಕಾರ್ಯದರ್ಶಿ ರಿಷಿತ್ ಮಾದಯ್ಯ ಈ ಬಗ್ಗೆ ಮಾಹಿತಿ ನೀಡಿದರು.

ಕಳೆದ ಬಾರಿ ಕೋವಿಡ್ ತೊಂದರೆ ನಡುವೆಯೂ ವೈಲ್ಡ್ ಮಾಸ್ರ‍್ಸ್ ಸೀಸನ್ ೧ ಅತೀ ಅಮೋಘವಾಗಿ ನಡೆದಿತ್ತು. ಸೈಯದ್ ಮುಸ್ತಕ್ ಅಲಿ, ವಿಜಯ್ ಹಜಾರೆ ಮತ್ತು ರಣಜಿ ಆಟಗಾರ ರಾದ ಕೆ.ಸಿ. ಕಾರ್ಯಪ್ಪ, ಕ್ರಾಂತಿ ಕುಮಾರ್, ದೇವಯ್ಯ, ವಿ. ಕೌಶಿಕ್, ದರ್ಶನ್ ಎಂ.ಬಿ., ಸ್ಟೆಲಿನ್ ಹೂವರ್, ಮಹಮದ್ ತಾ, ಅಕ್ಷಯಾ ಬಳಾಲ್, ಭರತ್ ದೂರಿ ಮತ್ತಿತರ ಅಗ್ರ ಕ್ರಮಾಂಕದ ಆಟಗಾರರು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದರು.

೨೦೨೨ನೇ ಸಾಲಿನಲ್ಲಿ ವೈಲ್ಡ್ ಮಾಸ್ರ‍್ಸ್ ಸೀಸನ್ ೨ ಮತ್ತೆ ಕೊಡಗಿನಲ್ಲಿ ಆಯೋಜನೆಗೊಳ್ಳುತ್ತಿದೆ. ಈ ಬಾರಿ ಇನ್ನೂ ಉತ್ತಮ ಆಟಗಾರರು ಬಂದು ಆಡುವ ನಿರೀಕ್ಷೆ ಇದೆ. ಪ್ರಥಮ ಬಹುಮಾನವಾಗಿ ೨ ಲಕ್ಷ ಮೌಲ್ಯದ ನಗದು, ಆಕರ್ಷಕ ಟ್ರೋಫಿ, ಬೆಳ್ಳಿ ಪದಕಗಳನ್ನು ನೀಡಲಾಗುವುದು. ದ್ವಿತೀಯ ಬಹುಮಾನವಾಗಿ ೧ ಲಕ್ಷ ಮೌಲ್ಯದ ನಗದು, ಆಕರ್ಷಕ ಟ್ರೋಫಿ. ಬೆಳ್ಳಿ ಪದಕಗಳನ್ನು ನೀಡಲಾಗುವುದು.

ಉತ್ತಮ ಮತ್ತು ಆಕರ್ಷಕವಾದ ಸರಣಿ ಶ್ರೇಷ್ಠ ಮತ್ತು ಇನ್ನು ಹಲವು ಬಹುಮಾನಗಳನ್ನು ನೀಡಲಾಗುವುದು. ಸುಮಾರು ೨೮ ತಂಡಗಳು ಭಾಗವಹಿಸುವ ನಿರೀಕ್ಷೆ ಇದ್ದು, ತಾ. ೨೫ ರಂದು ತಂಡಗಳು ಹೆಸರು ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ ೯೪೪೯೪೧೪೩೫೭, ೯೯೭೨೩೭೬೧೫೧ ದೂರವಾಣಿಯನ್ನು ಸಂಪರ್ಕಿಸಬಹುದು.

ಗೋಷ್ಠಿಯಲ್ಲಿ ಖಜಾಂಚಿ ಪಂಚಮ್ ಸೂದನ, ಉಪಾಧ್ಯಕ್ಷ ಸುಜಿತ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಲೋಹಿತ್, ಸಲಹೆ ಗಾರ ಅವಿನಾಶ್ ಉಪಸ್ಥಿತರಿದ್ದರು.