ಕೂಡಿಗೆ, ಮಾ. ೧೩: ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ದಿಟ್ಟ ಹೆಜ್ಜೆ ಇಟ್ಟು ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ ಕರೆ ನೀಡಿದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸುವ ಸಲುವಾಗಿ ಪ್ರೌಢಶಾಲೆಗಳನ್ನು ದತ್ತು ತೆಗೆದುಕೊಂಡಿರುವ ಅಧಿಕಾರಿಗಳಿಂದ ಪರೀಕ್ಷಾ ಫಲಿತಾಂಶವನ್ನು ಸುಧಾರಿಸುವ ಕುರಿತು ಏರ್ಪಡಿಸಿದ್ದ ಸುಧಾರಣಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದರು.

ಇತ್ತೀಚೆಗೆ ನಡೆದ ರಾಜ್ಯಮಟ್ಟದ ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತೆ ಪರೀಕ್ಷಾ ಫಲಿತಾಂಶವನ್ನು ವಿಶ್ಲೇಷಣೆ ನಡೆಸಿದ ಸಿಇಓ, ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶವನ್ನು ಸುಧಾರಿಸುವ ಕುರಿತು ಕೈಗೊಳ್ಳಬೇಕಾದ ಕಾರ್ಯ ಯೋಜನೆಗಳು ಹಾಗೂ ಮಕ್ಕಳ ಕಲಿಕೆಯ ತಂತ್ರಗಳ ಕುರಿತು ವಿವರಿಸಿದರು.

ಎಸ್.ಎಸ್.ಎಲ್.ಸಿ. ಫಲಿತಾಂಶವನ್ನು ಉತ್ತಮಪಡಿಸಲು ಜಿಲ್ಲೆಯಲ್ಲಿ ಕೈಗೊಂಡಿರುವ ಪರೀಕ್ಷಾ ಸುಧಾರಣಾ ಕ್ರಮಗಳ ಕುರಿತು ವಿವರಣೆ ನೀಡಿದ ಡಿಡಿಪಿಐ ವೇದಮೂರ್ತಿ, ಫಲಿತಾಂಶವನ್ನು ಸುಧಾರಿಸಲು ಪ್ರತಿ ಪ್ರೌಢಶಾಲೆಗೆ ನೇಮಕ ಮಾಡಿರುವ ದತ್ತು ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕೆಗೆ ಪ್ರೇರಣೆ ನೀಡುತ್ತಿದ್ದಾರೆ ಎಂದರು. ಶಾಲೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ವಿಶೇಷ ತರಗತಿಗಳನ್ನು ನಡೆಸುವುದರೊಂದಿಗೆ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಬೆಳಗಿನ ಜಾವ ಎದ್ದು ಎಸ್.ಎಸ್. ಎಲ್.ಸಿ. ಮಕ್ಕಳಿಗೆ ಮೊಬೈಲ್ ಫೋನ್ ಮೂಲಕ ಕರೆ ಮಾಡಿ ಬೆಳಗಿನ ಓದಿಗೆ ಅಣಿಗೊಳಿಸುವ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗೆಯೇ, ಎಸ್.ಎಸ್.ಎಲ್.ಸಿ. ಫಲಿತಾಂಶವನ್ನು ಉತ್ತಮಪಡಿಸಲು ಮಕ್ಕಳಿಗೆ ಶಾಲೆ ಮತ್ತು ಕ್ಲಸ್ಟರ್ ಮಟ್ಟದಲ್ಲಿ ಶಿಕ್ಷಕರು ಸೇರಿದಂತೆ ವೃತ್ತಿಪರ ಸಂಪನ್ಮೂಲ ವ್ಯಕ್ತಿಗಳ ಮೂಲಕ ಪ್ರೇರಣಾ ಸಭೆಗಳನ್ನು ನಡೆಸಲಾಗಿದೆ. ಈಗಾಗಲೇ ನಡೆಸಿರುವ ಪೂರ್ವ ಸಿದ್ಧತಾ ಪರೀಕ್ಷಾ ಫಲಿತಾಂಶ ಆಧರಿಸಿ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳ ಕಲಿಕೆಗೆ ವಿಶೇಷ ಗಮನಹರಿಸಲಾಗಿದೆ ಎಂದು ತಿಳಿಸಿದರು. ಡಯಟ್ ಸಂಸ್ಥೆಯ ಉಪ ನಿರ್ದೇಶಕ ಪ್ರಾಂಶುಪಾಲ ಜಿ. ರಂಗನಾಥಸ್ವಾಮಿ ಮಾತನಾಡಿ, ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ವಿಶೇಷ ಒತ್ತು ನೀಡಲಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸೋಮವಾರಪೇಟೆ ನೂತನ ಬಿಇಓ ಕೆ.ವಿ. ಸುರೇಶ್, ಫಲಿತಾಂಶವನ್ನು ಉತ್ತಮಪಡಿಸಲು ಪ್ರೌಢಶಾಲೆಗಳಲ್ಲಿ ಕೈಗೊಂಡಿರುವ ಯೋಜನೆ ಮತ್ತು ಕಾರ್ಯತಂತ್ರಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಎಸ್.ಎಸ್. ಎಲ್.ಸಿ. ಪರೀಕ್ಷಾ ನೋಡಲ್ ಅಧಿಕಾರಿ ಕೆ. ಕಾಂತರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ, ಮಂಜುನಾಥ್, ಈ ಹಿಂದೆ ಪ್ರಭಾರ ಬಿಇಓ ಆಗಿದ್ದ ಜಿ.ಎಂ. ಹೇಮಂತ್, ಎಸ್.ಎಸ್.ಎಲ್.ಸಿ. ಪರೀಕ್ಷೆ ಸುಧಾರಣೆಗೆ ಆಯಾ ತಾಲೂಕಿನಲ್ಲಿ ಕೈಗೊಂಡಿರುವ ಶೈಕ್ಷಣಿಕ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಡಿವೈಪಿಸಿ ಎಂ. ಕೃಷ್ಣಪ್ಪ, ಬಿ.ಆರ್.ಸಿ.ಗಳಾದ ವನಜಾಕ್ಷಿ, ಪಿ.ಕೆ. ನಳಿನಿ, ಸಿ.ಆರ್. ಶಶಿಧರ್, ಪರೀಕ್ಷೆಯ ತಾಲೂಕು ನೋಡಲ್ ಅಧಿಕಾರಿಗಳಾದ ಕೆ.ಬಿ. ರಾಧಾಕೃಷ್ಣ, ಎಂ.ಹೆಚ್. ಹರೀಶ್, ಪಿ.ಆರ್. ಅಯ್ಯಪ್ಪ, ಡಯಟ್‌ನ ಉಪನ್ಯಾಸಕರು ಇದ್ದರು.