ಗೋಣಿಕೊಪ್ಪಲು, ಮಾ. ೧೧: ಗ್ರಾಮದಲ್ಲಿ ನಿರಂತರ ಹುಲಿ ಹಾವಳಿಯಿಂದ ರೈತರ ಜಾನುವಾರು ಗಳು ಸಾವನ್ನಪ್ಪುತ್ತಿವೆ, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಇದ್ದರೂ ಹುಲಿ ಯನ್ನು ಸೆರೆಹಿಡಿಯಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಕುಂದ ಈಚೂರು ಸಂಚಾಲಕ ತೀತಮಾಡ ಶರಣು ಮುಂದಾಳತ್ವದಲ್ಲಿ ರೈತ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.
ಕಳೆದ ಮೂರು ದಿನಗಳಲ್ಲಿ ಈಚೂರು ಭಾಗದ ರೈತರ ಹಸುಗಳ ಮೇಲೆ ದಾಳಿ ನಡೆಸಿರುವ ಹುಲಿಯು ಒಂದು ಹಸುವನ್ನು ತಿಂದು ಹಾಕಿದೆ, ಉಳಿದೆರಡು ಹಸುಗಳ ಮೇಲೆ ಮಾರಣಾಂತಿಕ ಗಾಯ ಮಾಡಿದೆ.
ಹುಲಿ ದಾಳಿಗೆ ಸಿಲುಕಿದ ಹಸುಗಳು ಜೀವನ್ಮರಣ ಸ್ಥಿತಿಯಲ್ಲಿ ನರಳುತ್ತಿವೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿಯ ಸಂಚಾರವಿದ್ದರೂ ಹುಲಿಯ ಸೆರೆಗೆ ಅರಣ್ಯ ಇಲಾಖೆ ಹಿಂದೇಟು ಹಾಕುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡಿದರು.
ಕುಂದಾ ಈಚೂರು ರಸ್ತೆ ಜಂಕ್ಷನ್ ಬಳಿ ಸಮಾಗಮಗೊಂಡ ಗ್ರಾಮಸ್ಥರು ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸುವಂತೆ ಪಟ್ಟು ಹಿಡಿದರು.
ಪ್ರತಿಭಟನೆ ನಡೆಸುತ್ತಿರುವ ಸುದ್ದಿ ತಿಳಿದ ಗೋಣಿಕೊಪ್ಪ ಪೊಲೀಸರು ಘಟನೆ ಸ್ಥಳಕ್ಕೆ ಆಗಮಿಸಿದರು. ಈ ವೇಳೆ ರೈತ ಸಂಘದ ಸಂಚಾಲಕ ತೀತಿಮಾಡ ಶರಣು ಹಾಗೂ ಇತರ ಸದಸ್ಯರು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸುವಂತೆ ಪಟ್ಟು ಹಿಡಿದರು.
ನಂತರ ಸ್ಥಳಕ್ಕೆ ಅರಣ್ಯ ಇಲಾಖೆಯ ಪೊನ್ನಂಪೇಟೆ ವಲಯ ಅರಣ್ಯ ಸಿಬ್ಬಂದಿಗಳಾದ ದಿವಾಕರ್ ಹಾಗೂ ಇತರ ಸಿಬ್ಬಂದಿಗಳು ಆಗಮಿಸಿದರು.
ಅಧಿಕಾರಿಗಳನ್ನು ಗ್ರಾಮದ ಪ್ರಮುಖರಾದ ಗುಮ್ಮಟೀರ ಕಿಲನ್ ಗಣಪತಿ, ಗುಮ್ಮಟೀರ ದರ್ಶನ್ ಮುಂತಾದವರು ತೀವ್ರ ತರಾಟೆಗೆ ತೆಗೆದುಕೊಂಡರು.
ಗ್ರಾಮಸ್ಥರನ್ನು ಭಯ ಭೀತಗೊಳಿಸುತ್ತಿರುವ ಹುಲಿಯನ್ನು ಕೂಡಲೇ ಸೆರೆ ಹಿಡಿಯಲು ಬೋನ್ ಅಳವಡಿಸುವಂತೆಯೂ ಹಾಗೂ ಹಸುವನ್ನು ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿದರು.
ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣವೇ ಹುಲಿ ಬೋನನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ, ಪರಿಹಾರ ವಿತರಣೆಗೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು. ಈ ವೇಳೆ ಗ್ರಾಮದ ಪ್ರಮುಖರಾದ ತೀತಿಮಾಡ ವಾಸು ಗಣಪತಿ, ಅಯ್ಯಪ್ಪ, ಸುಜೀತ್, ತಿಮ್ಮಯ್ಯ, ಅಮಿತ್ ಉತ್ತಪ್ಪ, ನಿತಿನ್, ಮದ್ರೀರ ರವಿ, ರಂಜು, ರಶ್ಮಿ, ಜಗದೀಶ್ ಪೂಣಚ್ಚ, ಚಂಗಪ್ಪ, ಪೂವಣ್ಣ ಪಟ್ರಂಗಡ ಶ್ರೀಮಂತ್, ದೇವಮಕ್ಕಡ ರಮೇಶ್, ಮದ್ರಿರ ವಾಸು, ತೀತಿಮಾಡ ಕೃಷ್ಣ, ಕುಶಾಲಪ್ಪ ಇತರರು ಹಾಜರಿದ್ದರು.