ಮಡಿಕೇರಿ, ಮಾ. ೧೦: ಭಾರತದ ಆರ್ಥಿಕತೆಯ ಚೇತರಿಕೆಗೆ ಜೈವಿಕ ಇಂಧನ ಬಳಕೆಗೆ ಹೆಚ್ಚು ಒತ್ತುಕೊಡಬೇಕಾಗಿದೆ ಎಂದು ಲೂದಿಯಾನದ ಭಾರತೀಯ ಜೋಳ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಅಲ್ಲಾ ಸಿಂಗ್ ಅವರು ಅಭಿಪ್ರಾಯಪಟ್ಟರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ರಾಸಾಯನಶಾಸ್ತç ವಿಭಾಗದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ‘ ಎನೇಬ್ಲಿಂಗ್ ಇಕೊಸಿಸ್ಟಂ ಫಾರ್ ಮೈಝ್ ಬೇಸ್ಡ್ ಬಯೋಎಥೆನಾಲ್ ಇನ್ ಇಂಡಿಯಾ’ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ರಷ್ಯಾ-ಉಕ್ರೇನ್ ಯುದ್ಧ ಪರಿಣಾಮ ಮುಂದಿನ ದಿನಗಳಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗಲಿದ್ದು, ಇದಕ್ಕೆ ಪರ್ಯಾಯವಾಗಿ ಸಂಪೂರ್ಣ ಎಥೆನಾಲ್ ಆಧಾರಿತ ವಾಹನಗಳ ತಯಾರಿಕೆಗೆ ಸರ್ಕಾರ ಪ್ರೋತ್ಸಾಹಿಸಿದರೆ ಇಂಧನ ಖರೀದಿಗಾಗಿ ವ್ಯಯವಾಗುವ ಕೋಟ್ಯಂತರ ರೂಪಾಯಿಗಳನ್ನು ಉಳಿತಾಯ ಮಾಡಬಹುದಾಗಿದೆ ಎಂದರು.
ಇದೀಗ ದೇಶದ ತೈಲಕ್ಕೆ ಬಳಕೆಯಾಗುತ್ತಿರುವ ಎಥೆನಾಲ್ ಎಲ್ಲವೂ ಕಬ್ಬಿನಿಂದ ತಯಾರಿಸಲಾಗುತ್ತಿದೆ. ವಾಸ್ತವವಾಗಿ ಕಬ್ಬು ಬೆಳೆಗೆ ಅತೀ ಹೆಚ್ಚು ನೀರು ಬಳಕೆಯಾಗುತ್ತದೆ. ಆದರೆ, ಜೋಳ ಬೆಳೆಗೆ ಕಬ್ಬು ಬೆಳೆಗಿಂತ ಕಡಿಮೆ ನೀರು ಬಳಕೆಯಾಗುವುದರಿಂದ ಹಾಗೂ ಇದೀಗ ಅಂತರ್ಜಲದ ಪ್ರಮಾಣ ಕೂಡ ಕಡಿಮೆಯಾಗುತ್ತಿರುವುದರಿಂದ, ಜೋಳದಿಂದ ಎಥೆನಾಲ್ ತಯಾರಿಕೆಗೆ ಸರ್ಕಾರ ಹೆಚ್ಚು ಒತ್ತುಕೊಟ್ಟರೆ ದೇಶದ ಪ್ರಗತಿಗೆ ಪೂರಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
೨೦೩೦ರ ಅವಧಿಗೆ ಪೆಟ್ರೋಲಿನಲ್ಲಿ ಎಥೆನಾಲ್ ಪ್ರಮಾಣ ಶೇ.೨೦ ಹಾಗೂ ಡೀಸೆಲ್ನಲ್ಲಿ ಶೇ. ೫ ರಷ್ಟು ಎಥೆನಾಲ್ ಬೆರೆಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದ್ದು, ಈ ನಿಟ್ಟಿನಲ್ಲಿ ಈಗಿನಿಂದಲೇ ಜೋಳ ಬೆಳೆಗೆ ಹಾಗೂ ಜೋಳದಿಂದ ಎಥೆನಾಲ್ ತೆಗೆಯುವ ಕಾರ್ಖಾನೆಗಳನ್ನು ಸ್ಥಾಪಿಸಲು ಉತ್ತೇಜನ ನೀಡುವುದರಿಂದ ಆರ್ಥಿಕ ಪ್ರಗತಿಗೆ ಹೆಚ್ಚು ಕೊಡುಗೆ ನೀಡಬಹುದಾಗಿದೆ ಎಂದರು.
ಸಂಪೂರ್ಣ ಎಥೆನಾಲ್ ಆಧಾರಿತ ವಾಹನ ಚಾಲನೆಗೆ ‘ಇ-೨೦’ ವಾಹನಗಳ ತಯಾರಿಕೆಗೂ ಸರ್ಕಾರ ಉತ್ತೇಜನ ನೀಡಿದರೆ ಭಾರತ ಇಂಧನ ಕೊರತೆ ಎದುರಿಸುವುದಿಲ್ಲ ಎಂದರು. ವಿಶೇಷವಾಗಿ ಸಂಪೂರ್ಣ ಎಥೆನಾಲ್ ಆಧಾರಿತ ಇ-೨೦ ಎಂಜಿನಿನ ದ್ವಿಚಕ್ರ ವಾಹನವನ್ನು ಅಭಿವೃದ್ಧಿಪಡಿಸಿ ಜನಸಾಮಾನ್ಯರ ಕೈಗೆಟುಕುವ ಬೆಲೆಗೆ ಸಿಗುವಂತೆ ಮಾಡಿದರೆ, ವಿದೇಶಗಳಿಂದ ಇಂಧನ ಆಮದು ಮಾಡಲು ವ್ಯಯವಾಗುತ್ತಿರುವ ಕೋಟ್ಯಂತರ ಹಣ ಉಳಿತಾಯವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಚೌರೀರ ಜಗತ್ ತಿಮ್ಮಯ್ಯ, ಸಂಶೋಧನೆಗಳು ಕೇವಲ ಲ್ಯಾಬ್ಗಳಿಗೆ ಮಾತ್ರ ಸೀಮಿತವಾಗಿರಬಾರದು. ಬದಲಾಗಿ ಅದು ಸಮಾಜಕ್ಕೆ ಉಪಯೋಗವಾಗುವಂತಿರಬೇಕು ಎಂದು ಅಭಿಪ್ರಾಯಪಟ್ಟರು. ಕೊಡಗಿನಲ್ಲಿ ಕಂಡು ಬರುತ್ತಿದ್ದ ‘ಕಾಚು’ ಎಂಬ ಕಾಯಿಯಿಂದಲೂ ಜೈವಿಕ ಇಂಧನ ತಯಾರಿಸಬಹುದಾಗಿದೆ. ಆದರೆ ಅದರ ಪ್ರಮಾಣ ಈಗ ವಿರಳವಾಗಿದೆ ಎಂದರು. ಇಂತಹ ಸೆಮಿನಾರ್ಗಳಿಂದ ಸ್ಫೂರ್ತಿ ಪಡೆದು ಸಮಾಜಕ್ಕೆ ಅನುಕೂಲವಾಗುವಂತಹ ಮತ್ತಷ್ಟು ಅಧ್ಯಯನಗಳು, ಅನ್ವೇಷಣೆಗಳನ್ನು ನಡೆಸುವಂತೆ ಕರೆ ನೀಡಿದರು.
ರಸಾಯನಶಾಸ್ತç ವಿಭಾಗದ ಮುಖ್ಯಸ್ಥ ಡಾ. ಜೆ.ಜಿ. ಮಂಜುನಾಥ್ ಅವರು ಸ್ವಾಗತಿಸಿದರು. ಸೂಕ್ಷಾö್ಮಣು ಜೀವಶಾಸ್ತç ವಿಭಾಗದ ಉಪನ್ಯಾಸಕಿ ಡಾ. ಗೀತಾಂಜಲಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಕೆ.ಎಸ್. ಐಶ್ವರ್ಯ ಪ್ರಾರ್ಥಿಸಿದರು, ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಅಫ್ರೀನಾ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ತೃತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ರಾಸಾಯನಶಾಸ್ತç ವಿಭಾಗದ ಉಪನ್ಯಾಸಕಿ ಮೌಲ್ಯ ವಂದಿಸಿದರು. ಸಸ್ಯಶಾಸ್ತç ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
-ವರದಿ: ಲೀಷ್ಮಾ ಕೆ.ಕೆ, ಪೂರ್ಣಿಮಾ. ಪಿ.ಬಿ, ಪ್ರಥಮ ಪತ್ರಿಕೋದ್ಯಮ ವಿಭಾಗ, ಫೀಲ್ಡ್ ಮಾರ್ಷಲ್ಕೆ.ಎಂ.ಕಾರ್ಯಪ್ಪಕಾಲೇಜು, ಮಡಿಕೇರಿ.