ಶನಿವಾರಸಂತೆ, ಮಾ. ೯: ಸುಧಾರಣೆಯತ್ತ ಸಾಗುತ್ತಿದ್ದ ಶನಿವಾರಸಂತೆಯ ಸಮುದಾಯ ಆರೋಗ್ಯ ಕೇಂದ್ರ ಮತ್ತೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದೆ. ವೈದ್ಯರ ಕೊರತೆಯಿಂದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣ ವಾಗಿದೆ. ಕೆಲ ತಿಂಗಳ ಹಿಂದೆ ಸಮಸ್ಯೆಗಳಿಂದ ಮುಕ್ತವಾಗಿದ್ದ ಆರೋಗ್ಯ ಕೇಂದ್ರ ಪುನಃ ಹಿಂದಿನ ಸ್ಥಿತಿಗೆ ಮರಳುತ್ತಿದೆ ಎಂದು ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಕೇಂದ್ರದಲ್ಲಿ ಈಗ ಒಂದು ವರ್ಷ ಕಡ್ಡಾಯ ಸರಕಾರಿ ಸೇವೆಯ ಓರ್ವ ಎಂ.ಬಿ.ಬಿ.ಎಸ್. ವೈದ್ಯ ಡಾ. ಯಶ್ವಂತ್, ಓರ್ವ ಆಯುಷ್ ವೈದ್ಯ ಡಾ. ಪ್ರಾಣೇಶ್, ಓರ್ವ ದಂತ ವೈದ್ಯ ಡಾ. ಬಿಪಿನ್, ೮ ಜನ ಶುಶ್ರೂಷಕಿಯರಿದ್ದಾರೆ. ಕಚೇರಿ ಸೂಪರಿಂಟೆAಡೆAಟ್ ಗಿರೀಶ್, ಟೆಕ್ನಿಷಿಯನ್ಗಳಾದ ರಶೀದ್, ರುದ್ರೇಶ್ ಹಾಗೂ ಗುತ್ತಿಗೆ ಆಧಾರದ ಇಬ್ಬರು ಆ್ಯಂಬುಲೆನ್ಸ್ ಚಾಲಕರು ಮಾತ್ರ ಇದ್ದಾರೆ.
೨೫ ವರ್ಷಗಳ ಹಿಂದೆ ವಿಶ್ವ ಬ್ಯಾಂಕ್ ನೆರವಿನಿಂದ ರೂ. ೧.೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಇಂದಿಗೂ ಉದ್ಘಾಟನೆ ಭಾಗ್ಯ ಕಾಣದ ಭವ್ಯ ಕಟ್ಟಡದ ಆರೋಗ್ಯ ಕೇಂದ್ರ ೩೦ ಹಾಸಿಗೆಗಳ ಸೌಲಭ್ಯ ಹೊಂದಿದೆ. ವರ್ಷಕ್ಕೆ ರೂ. ೩ ಲಕ್ಷ ರೂಪಾಯಿ ಮೊತ್ತದ ಔಷಧಿ ಸರಬರಾಜಾಗುತ್ತಿದೆ. ಹೆರಿಗೆ ಸೌಲಭ್ಯವಿದ್ದು, ಮುಂದಿನ ದಿನಗಳಲ್ಲಿ ಸಿಜೇರಿಯನ್ ಸೌಲಭ್ಯ, ಕುಟುಂಬ ಯೋಜನೆ ಶಿಬಿರವನ್ನು ಆಯೋಜಿಸುವ ಉದ್ದೇಶವಿದೆ.
೮,೭೫೮ ಜನಸಂಖ್ಯೆ ಇರುವ ಶನಿವಾರಸಂತೆ ಸುತ್ತಮುತ್ತ ಕೂಲಿ ಕಾರ್ಮಿಕರೆ ಅಧಿಕ ಸಂಖ್ಯೆಯಲ್ಲಿದ್ದಾರೆ. ಪ್ರತಿನಿತ್ಯ ನೂರಕ್ಕೂ ಅಧಿಕ ಮಂದಿ ರೋಗಿಗಳು ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ರೋಗಿಗಳೇನೋ ವಿವಿಧ ಕಾಯಿಲೆ ಹೊತ್ತು ಧಾವಿಸಿ ಬರುತ್ತಾರೆ. ಆದರೆ, ಪರೀಕ್ಷಿಸಿ, ಚಿಕಿತ್ಸೆ ನೀಡುವ ವೈದ್ಯರೇ ಈ ಕೇಂದ್ರದಲ್ಲಿಲ್ಲ. ಕೇಂದ್ರಕ್ಕೆ ಅಪಘಾತ, ಆತ್ಮಹತ್ಯೆ ಮತ್ತಿತರ ಪ್ರಕರಣಗಳು ಆಗಿಂದಾಗ್ಗೆ ಬರುತ್ತಿದ್ದು, ಶವಪರೀಕ್ಷೆ ನಡೆಸಲು ವೈದ್ಯರು ಹಾಗೂ ಕೋವಿಡ್ ಸಂದರ್ಭದಲ್ಲಿ ತಜ್ಞ ವೈದ್ಯರ ಅತ್ಯಗತ್ಯವಿದೆ ಎನ್ನುತ್ತಾರೆ ಕಚೇರಿ ಸೂಪರಿಂಟೆAಡೆAಟ್ ಗಿರೀಶ್.