ಮಡಿಕೇರಿ, ಮಾ. ೯: ಮಡಿಕೇರಿ ತಾಲೂಕಿನ ಮಕ್ಕಂದೂರು - ತಂತಿಪಾಲ ಮಾಂದಲ್‌ಪಟ್ಟಿ ಗ್ರಾಮೀಣ ರಸ್ತೆಯ ಆವಂಡಿ ಗ್ರಾಮದಲ್ಲಿ ಬರುವ ಮುಕ್ಕೋಡ್ಲು ಹೊಳೆಗೆ ಸೇತುವೆ ನಿರ್ಮಾಣ ಯೋಜನೆಯನ್ನು ಸದ್ಯದ ಮಟ್ಟಿಗೆ ಕೈಬಿಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಮಾಹಿತಿ ನೀಡಿದ್ದಾರೆ. ಮೇಲ್ಮನೆಯಲ್ಲಿ ಸದಸ್ಯೆ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಸಚಿವರು ಮಾಹಿತಿ ಒದಗಿಸಿದ್ದಾರೆ.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಒಟ್ಟು ೫೦೪ ಸೇತುವೆಗಳ ಪಟ್ಟಿಯನ್ನು ಅನುಮೋದನೆಗಾಗಿ ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿದ್ದು, ಇದರಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕು ಮಕ್ಕಂದೂರು - ತಂತಿಪಾಲ - ಮಾಂದಲಪಟ್ಟಿ ಗ್ರಾಮೀಣ ರಸ್ತೆಯ ಸರಪಳಿ ೯.೧೦ರ ಆವಂಡಿ ಗ್ರಾಮದ ನಾಪಂಡ ಕಾಡು ಎಂಬಲ್ಲಿ ಮುಕ್ಕೋಡ್ಲು ಹೊಳೆಗೆ ಸೇತುವೆ ನಿರ್ಮಾಣ ಕಾಮಗಾರಿಗಾಗಿ ರೇಖಾ ಅಂದಾಜು ಮೊತ್ತ ರೂ. ೧.೫೦ ಕೋಟಿಗಳ ಮೊತ್ತದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಸೇರ್ಪಡೆಯಾಗಿತ್ತು. ಆರ್ಥಿಕ ಇಲಾಖೆಯು ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದ್ದು, ಸದ್ಯಕ್ಕೆ ಇದನ್ನು ಕೈಬಿಡಲಾಗಿದೆ.

ಪ್ರಸ್ತುತ ಕೆ.ಆರ್.ಡಿ.ಸಿ.ಎಲ್‌ನ ಉದ್ದೇಶಿತ ಯೋಜನೆಗಳು ಬಹಳಷ್ಟಿವೆ. ಈ ಹಿನ್ನೆಲೆಯಲ್ಲಿ ಆಡಳಿತಾತ್ಮಕ ಇಲಾಖೆಯು ಆರ್ಥಿಕ

ಸಮಸ್ಯೆ ಎದುರಾಗಲಿರುವದರಿಂದ ಈ ಹಿಂದಿನ ಯೋಜನೆಗಳು ಪೂರ್ಣಗೊಳ್ಳುವವರೆಗೆ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳದಂತೆ ಸಲಹೆ ನೀಡಿದೆ. ಈ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ಈ ಯೋಜನೆಯನ್ನು ಕೈಬಿಡಲಾಗಿದ್ದು, ಮುಂದೆ ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.