ಮೈಸೂರು, ಮಾ. ೯: ಹಾರಂಗಿ ಜಲಾಶಯದ ಎಡದಂಡೆ ನಾಲೆಯ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಭೂಮಿಪೂಜೆ ಮಾಡಲು ಬಂದಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಅವ್ಯವಸ್ಥೆಗೆ ಕೆಂಡಾಮAಡಲರಾಗಿ ಹಿಂತಿರುಗಿದ ಘಟನೆ ಇಂದು ನಡೆದಿದೆ.

ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕಿನ ಚೌಕಹಳ್ಳಿ ಗ್ರಾಮದಲ್ಲಿ ಬುಧವಾರ ನಾಲೆಯ ರಸ್ತೆ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆದರೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಶಾಮಿಯಾನ ಮತ್ತು ಕುರ್ಚಿಯ ವ್ಯವಸ್ಥೆ ಮಾಡಿರಲಿಲ್ಲ. ಕಾರ್ಯಕ್ರಮ ಸ್ಥಳದಲ್ಲಿ ಯಾವುದೇ ವ್ಯವಸ್ಥೆ ಮಾಡದಿದ್ದಕ್ಕೆ ಅಧಿಕಾರಿಗಳ ವಿರುದ್ಧ ಸಂಸದೆ ಸುಮಲತಾ ಕೆಂಡಾಮAಡಲರಾಗಿ ನಿಗದಿಯಾಗಿದ್ದ ಭೂಮಿಪೂಜೆ ನೆರವೇರಿಸದೆ ಹಿಂತಿರುಗಿದ್ದಾರೆ.

ಕೇಂದ್ರ ಸರ್ಕಾರದ ಸಂಸದರ ನಿಧಿಯಿಂದ ನಾಲಾ ದುರಸ್ತಿ ಕಾಮಗಾರಿ ಕಾರ್ಯ ಕೈಗೊಳ್ಳಲಾಗಿತ್ತು. ಆದರೆ ಕಾರ್ಯಕ್ರಮದಲ್ಲಿ ಸರಿಯಾದ ವ್ಯವಸ್ಥೆ ಮಾಡದಿದ್ದಕ್ಕೆ ಕಾವೇರಿ ನೀರಾವರಿ ನಿಗಮದ ಕುಶಾಲನಗರ ವೃತ್ತ ಅಧೀಕ್ಷಕ ಎಂಜಿನಿಯರ್ ಚನ್ನಕೇಶವ ಅವರಿಗೆ ಕರೆ ಮಾಡಿದ ಸಚಿವೆ ಸಂಸದರಿಗೆ ಅಗೌರವ ತೋರಿಸುತ್ತಿದ್ದೀರಿ, ಶಿಸ್ತುಬದ್ಧ ವ್ಯವಸ್ಥೆ ಮಾಡಿಲ್ಲ. ಸಂಸದರ ಕಾರ್ಯಕ್ರಮಕ್ಕೆ ಪ್ರತಿ ಬಾರಿಯೂ ಹೀಗೆ ಮಾಡುತ್ತಿದ್ದೀರಿ. ನಿಮ್ಮ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ದೂರು ನೀಡುವೆ. ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸುವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದಲ್ಲದೆ ಸ್ಥಳದಲ್ಲಿದ್ದ ಕಾರ್ಯಪಾಲಕ ಅಭಿಯಂತರ ಬಿ.ಜೆ. ಈರಣ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರ ಗುರುರಾಜ್ ಹಾಗೂ ಸಹಾಯಕ ಅಭಿಯಂತರ ಅಭಿಲಾಷ್ ಅವರನ್ನೂ ಸಂಸದೆ ಸುಮಲತಾ ತೀವ್ರ ತರಾಟೆಗೆ ತೆಗೆದುಕೊಂಡರು.

-ಕೋವರ್ ಕೊಲ್ಲಿ ಇಂದ್ರೇಶ್