ಮಡಿಕೇರಿ, ಮಾ. ೯: ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕದಿಂದ ವೀರಶೈವ ಲಿಂಗಾಯಿತ ಸಮಾಜದ ಹತ್ತನೇ ತರಗತಿ ಹಾಗೂ ಪಿಯುಸಿಯಲ್ಲಿ ಶೇ.೮೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ.

ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಮಹಾಸಭಾದ ಕೊಡಗು ಘಟಕದ ಅಧ್ಯಕ್ಷ ಹೆಚ್.ವಿ. ಶಿವಪ್ಪ ಹಾಗೂ ಗೌರವಾಧ್ಯಕ್ಷರಾದ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಈ ಕುರಿತು ಮಾಹಿತಿ ನೀಡಿದರು.

೨೦೨೦-೨೧ನೇ ಸಾಲಿನಲ್ಲಿ ಪಿಯುಸಿ ಹಾಗೂ ಹತ್ತನೇ ತರಗತಿಯಲ್ಲಿ ಶೇ.೮೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಕೈ ಬರಹದ ಅರ್ಜಿಯೊಂದಿಗೆ ಅಂಕಪಟ್ಟಿ, ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಜಾತಿ ಪ್ರಮಾಣ ಪತ್ರದೊಂದಿಗೆ ತಾ. ೨೫ರೊಳಗಾಗಿ ಶಾಂಭಶಿವಮೂರ್ತಿ, ಮನೆ ನಂ.-೫೪೧, ೪ನೇ ಬ್ಲಾಕ್, ಶಿವರಾಮಕಾರಂತ ಬಡಾವಣೆ, ಕುಶಾಲನಗರ ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು. ವೀರಾಜಪೇಟೆ ತಾಲೂಕಿನವರು ೯೯೦೨೩೨೨೬೫೨, ಸೋಮವಾರಪೇಟೆ ತಾಲೂಕಿನವರು ೯೮೮೦೮೧೯೧೭೧, ಮಡಿಕೇರಿ ತಾಲೂಕಿನವರು ೯೮೮೬೩೮೩೭೮೩ ದೂರವಾಣಿಗಳನ್ನು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದು. ಪ್ರತಿಭಾ ಪುರಸ್ಕಾರವನ್ನು ಏಪ್ರಿಲ್ ಕೊನೆಯ ಅಥವಾ ಮೇ ಮೊದಲವಾರದಲ್ಲಿ ಆಯೋಜಿಸಲಾಗುತ್ತಿದೆ. ಇದರೊಂದಿಗೆ ಬಸವ ಜಯಂತಿ, ಶಿವಕುಮಾರ ಸ್ವಾಮಿಗಳ ಜಯಂತಿ ಆಚರಣೆಯು ನಡೆಯಲಿದೆ ಎಂದು ಅವರುಗಳು ಮಾಹಿತಿಯಿತ್ತರು.

ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಶಾಂಭಶಿವಮೂರ್ತಿ, ಉಪಾಧ್ಯಕ್ಷ ಜಿ.ಎಂ. ಕಾಂತರಾಜ್, ಕೋಶಾಧಿಕಾರಿ ಹೆಚ್.ಪಿ. ಉದಯಕುಮಾರ್, ಮಮತಾ ಸತೀಶ್ ಉಪಸ್ಥಿತರಿದ್ದರು.