ವೀರಾಜಪೇಟೆ, ಮಾ. ೧೦: ರಾಜ್ಯ ಸರ್ಕಾರ ಕೊಡಗು ಜಿಲ್ಲೆೆಯನ್ನು ಎಲ್ಲಾ ವಿಚಾರದಲ್ಲೂ ನಿರ್ಲಕ್ಷಿಸುತ್ತಿದೆ. ಈ ಬಾರಿಯ ಮುಂಗಡ ಪತ್ರದಲ್ಲೂ ಜಿಲ್ಲೆಗೆ ಹೆಚ್ಚಿನ ಸ್ಥಾನಮಾನ ನೀಡಲಿಲ್ಲ. ರೈತರ ಪಂಪ್‌ಸೆಟ್‌ಗೆ ನೀಡುವ ೧೦ ಹೆಚ್‌ಪಿ ವಿದ್ಯುತ್ ಶುಲ್ಕ ವಿನಾಯಿತಿ ನೀಡಲಿಲ್ಲ. ರೈತರಿಗೆ ವಿದ್ಯುತ್ ಶುಲ್ಕ ವಿನಾಯಿತಿ ನೀಡದಿದ್ದರೆ, ಉತ್ತರ ಭಾರತದಲ್ಲಿ ನಡೆಸಿದ ರೀತಿಯಲ್ಲಿ ಪ್ರತಿಭಟನೆ ಅನಿವಾರ್ಯ ಎಂದು ಅಮ್ಮತ್ತಿ ರೈತ ಸಂಘದ ಗೌರವ ಅಧ್ಯಕ್ಷ ಕಾವಡಿಚಂಡ ಯು. ಗಣಪತಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊಡಗಿನ ರೈತರು ಕೇವಲ ಮಳೆಯನ್ನು ನಂಬಿ ಕೃಷಿ ನಡೆಸುವವರು. ಉಳಿದ ಜಿಲ್ಲೆಯವರು ಅಣೆಕಟ್ಟಿನ ನೀರಿಗೆ ಅವಲಂಬಿತರು. ಕೆಲವು ಸಂದರ್ಭದಲ್ಲಿ ಅತಿ ಹೆಚ್ಚಿನ ಮಳೆಯಿಂದಾಗಿ ಅತಿವೃಷ್ಟಿಗೆ ಬಲಿಯಾಗುತ್ತಿದ್ದೇವೆ. ಕೊಡಗು ಜಿಲ್ಲೆ ಹೊರತು ಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಿಗೆ ಪಂಪ್‌ಸೆಟ್‌ಗೆ ಬಳಸುವ ೧೦ ಹೆಚ್.ಪಿ ವಿದ್ಯುತ್ ಶುಲ್ಕ ವಿನಾಯಿತಿ ನೀಡಿದ್ದಾರೆ. ಇಂತಹ ಮಲತಾಯಿ ದೊರಣೆ ಜಿಲ್ಲೆಯ ಮೇಲೆ ಏಕೆ ಎಂದು ಪಶ್ನಿಸಿದ ಅವರು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅಮ್ಮತ್ತಿ ರೈತ ಸಂಘದ ನಿಯೋಗ ಅವರ ಬಳಿ ತೆರಳಿದ್ದಾಗ ವಿದ್ಯುತ್ ಶುಲ್ಕ ವಿನಾಯಿತಿಗೆ ಒಪ್ಪಿಗೆ ಸೂಚಿಸಿದ್ದರು. ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಮನವಿ ಸಲ್ಲಿಸಿದಾಗ ವಿನಾಯಿತಿಯ ಭರವಸೆ ನೀಡಿದ್ದರು. ಆದರೆ ಈ ಬಾರಿಯ ಮುಂಗಡ ಪತ್ರದಲ್ಲಿ ಜಿಲೆಯನ್ನು ಕೈಬಿಟ್ಟು ಉಳಿದ ಜಿಲ್ಲೆಗೆ ಪ್ರಾಧಾನ್ಯತೆ ನೀಡಲಾಗಿದೆ ಎಂದು ಹೇಳಿದರು.

ಅಧ್ಯಕ್ಷ ಕೇಚಂಡ ಕುಶಾಲಪ್ಪ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕಾಫಿ ಬೆಳೆಯುದೇ ಕಷ್ಟ ಸಾಧ್ಯವಾಗಿದೆ. ರಸಗೊಬ್ಬರಗಳ ಬೆಲೆ ಏರಿಕೆ, ಕಾಡು ಪ್ರಾಣಿಗಳ ಉಪಟಳ, ಕೆಲವೊಂದು ಸಲ ಅತಿವೃಷ್ಟಿಗಳಿಗೆ ಬಲಿಯಾಗಿ ಕಾಫಿ ಫಸಲು ಕುಂಠಿತಗೊಳ್ಳುತ್ತಿದೆ. ಇದೀಗ ರೈತರ ಪಂಪ್ ಸೆಟ್‌ಗಳಿಗೆ ವಿದ್ಯುತ್ ದರವನ್ನು ಕಡಿತಗೊಳಿಸದೆ ಜಿಲ್ಲೆಯ ರೈತರನ್ನು ಸರ್ಕಾರ ಸಂಪೂರ್ಣ ಕಡೆಗಣಿಸಿದೆ. ಜಿಲ್ಲೆಯ ಜನಪ್ರತಿನಿಧಿಗಳ ಜತೆ ಚರ್ಚಿಸಿದರೂ ಪ್ರಯೋಜನ ಕಾಣುತ್ತಿಲ್ಲ ಎಂದು ಆರೋಪಿಸಿದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಮನೆಯಪಂಡ ಜಿ. ಪೊನ್ನಪ್ಪ, ಜಂಟಿ ಕಾರ್ಯದರ್ಶಿ ಪಿ.ಬಿ ಹರಿ ಉಪಸ್ಥಿತರಿದ್ದರು.