ವೀರಾಜಪೇಟೆ, ಮಾ. ೯: ಸೋಮವಾರ ಸಂಜೆ ವೀರಾಜಪೇಟೆ ಹೊರವಲಯದ ಬಿಳಗುಂದ ಗ್ರಾಮ ದಲ್ಲಿ ತಂದೆ ಮಗನ ಮಧ್ಯೆ ಜಗಳವಾಗಿದ್ದು, ಜಗಳದ ಬಳಿಕ ಅಪ್ಪ ಸುಬ್ಬಯ್ಯ ಮನೆಯಿಂದ ಕಾಣೆಯಾಗಿ ದ್ದರು. ಅಪ್ಪ ಕಾಣೆಯಾಗಿದ್ದಕ್ಕೆ ಮಗನೇ ಕಾರಣ ಎಂದು ಮನೆಯಲ್ಲಿ ಮಂಗಳವಾರ ತಾಯಿ ಮತ್ತು ಮಗನ ಮಧ್ಯೆ ಮಾತುಕತೆ ನಡೆದಿದೆ. ಸಂಜೆ ನೋಡಲಾಗಿ ತಂದೆಯ ಮೃತದೇಹ ದೊರೆತಿದ್ದು, ಇದೇ ನೋವಿನಿಂದ ಮಗನೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಗ ಗಿರೀಶ್ (೩೯) ಮಂಗಳವಾರ ವೀರಾಜಪೇಟೆ ಪಟ್ಟಣಕ್ಕೆ ಬಂದು ಸಂಜೆ ಮನೆಗೆ ತೆರಳಿದ ಸಂದರ್ಭದಲ್ಲಿ ತಂದೆ ನೇಣಿಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಸುಬ್ಬಯ್ಯ (೭೯) ತನ್ನಿಂದಲೇ ಆತ್ಮಹತ್ಯೆ ಮಾಡಿಕೊಂಡರು ಎಂಬ ಅಪರಾಧ ಭಾವನೆಯಿಂದ ತಾನು ಅಲ್ಲೇ ಪಕ್ಕದಲ್ಲಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಂಗಳವಾರ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು.
ಮನೆಯ ಪಕ್ಕವಿದ್ದ ಕೆರೆಯ ಬಳಿ ಗಿರೀಶ್ನ ಚಪ್ಪಲಿಗಳು ಮಾತ್ರ ಪತ್ತೆಯಾಗಿದ್ದವು. ಸ್ಥಳಕ್ಕೆ ತೆರಳಿದ ವೀರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಕತ್ತಲಾದ ಕಾರಣ ಕೆರೆಯಲ್ಲಿ ಕಾರ್ಯಾಚರಣೆ ಸಾಧ್ಯವಾಗದೇ ಹಿಂದಿರುಗಿದ್ದರು.
ಬುಧವಾರ ಬೆಳ್ಳಿಗೆ ೮.೩೦ರ ವೇಳೆಗೆ ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಗಿರೀಶ್ನ ಶವವನ್ನು ಕೆರೆಯಿಂದ ಹೊರ ತೆಗೆಯಲಾಯಿತು.
ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮಧ್ಯಾಹ್ನದ ವೇಳೆಗೆ ಬಿಳುಗುಂದ ಗ್ರಾಮದಲ್ಲಿ ತಂದೆ ಮತ್ತು ಮಗನ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಗಂಡ ಹಾಗೂ ಮಗನನ್ನು ಒಟ್ಟಿಗೆ ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.