ಕೊಡ್ಲಿಪೇಟೆ,ಮಾ.೯: ಜಿಲ್ಲೆಯ ಕೊಡ್ಲಿಪೇಟೆ ಮಾರ್ಗವಾಗಿ ಹಾಸನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಸ್ಥಗಿತಗೊಂಡಿರುವುದರಿAದ ಅಂತರ್ಜಿಲ್ಲಾ ರಸ್ತೆ ಸಂಚಾರಕ್ಕೆ ಸಂಚಕಾರವಾಗಿದೆ.
ಕೊಡಗು-ಹಾಸನ ಜಿಲ್ಲೆ ಸಂಪರ್ಕ ರಸ್ತೆಯಲ್ಲಿರುವ ಹೇಮಾವತಿ ನದಿಗೆ ಕಳೆದ ೬ ವರ್ಷಗಳ ಹಿಂದೆಯೇ ಬೃಹತ್ ಸೇತುವೆ ನಿರ್ಮಾಣವಾಗಿದ್ದು, ಸಮರ್ಪಕ ರಸ್ತೆ ಇಲ್ಲದೇ ಇರುವುದರಿಂದ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ.
ಕೊಡ್ಲಿಪೇಟೆ-ಶಿರಗಾವರ ನಡುವೆ ಇರುವ ಸೇತುವೆಯ ಎರಡೂ ಬದಿಯಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಿರುವ ಗುತ್ತಿಗೆದಾರ ಇದೀಗ ನಾಪತ್ತೆಯಾಗಿದ್ದು, ಡಾಂಬರೀಕರಣವಾಗದ ಹಿನ್ನೆಲೆ ವಾಹನಗಳ ಸಂಚಾರಕ್ಕೆ ತೊಡಕಾಗಿದೆ.
ಪರಿಣಾಮ ಲಕ್ಷಾಂತರ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದ್ದರೂ ಪ್ರಯೋಜನವಿಲ್ಲದಂತಾಗಿದೆ. ಇದರಿಂದಾಗಿ ಕೇವಲ ೨ ಕಿ.ಮೀ.ನಲ್ಲಿ ಹಾಸನದ ಮಗ್ಗೆ ತಲುಪಬಹುದಾದ ವಾಹನ ಸವಾರರು ೧೭ ಕಿ.ಮೀ. ಬಳಸಿಕೊಂಡು ಕೆರೋಡಿ, ಕೆಂಚಮ್ಮನಹೊಸಕೋಟೆ ಮೂಲಕ ಮಗ್ಗೆಗೆ ಆಗಮಿಸಬೇಕಿದೆ.
ಕಳೆದ ಎರಡು ತಿಂಗಳ ಹಿಂದೆ ರಸ್ತೆ ಕಾಮಗಾರಿಗಾಗಿ ಎರಡೂ ಬದಿಯಲ್ಲಿ ಜಲ್ಲಿ ಕಲ್ಲುಗಳನ್ನು ಹರಡಿರುವ ಗುತ್ತಿಗೆದಾರ, ಡಾಂಬರು ಹಾಕಲು ಮೀನಾಮೇಷ ಎಣಿಸುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದ್ದರೂ ಸ್ಪಂದನೆ ಶೂನ್ಯವಾಗಿದೆ ಎಂದು ಕೊಡ್ಲಿಪೇಟೆ ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಡಿ.ಪಿ. ಭೂಪಾಲ್ ಆರೋಪಿಸಿದ್ದಾರೆ.
ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆ ಸಾರ್ವಜನಿಕರ ಬಳಕೆಯಿಂದ ದೂರ ಉಳಿದಿದೆ. ಅಸಮರ್ಪಕ ರಸ್ತೆಯಿಂದ ವಾಹನ ಸವಾರರು ಸಮಸ್ಯೆಗೆ ಸಿಲುಕಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆಯೂ ಅಧಿಕವಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಕೇವಲ ೨ ಕಿ.ಮೀ. ಅಂತರದಲ್ಲಿರುವ ಪ್ರದೇಶಕ್ಕೆ ೧೭ ಕಿ.ಮೀ. ಬಳಸಿಕೊಂಡು ತೆರಳಬೇಕಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ದಿವ್ಯ ನಿರ್ಲಕ್ಷö್ಯ ತಾಳಿರುವುದು ಖಂಡನೀಯ ಎಂದು ಭೂಪಾಲ್ ಹೇಳಿದ್ದಾರೆ.
ತಕ್ಷಣ ರಸ್ತೆ ಕಾಮಗಾರಿ ಕೈಗೊಂಡು ಸಾರ್ವಜನಿಕರ ಸಮಸ್ಯೆಯನ್ನು ಬಗೆಹರಿಸಬೇಕು. ತಪ್ಪಿದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕೊಡ್ಲಿಪೇಟೆ ಹಾಗೂ ಹಾಸನ ಜಿಲ್ಲೆಯ ಮಗ್ಗೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ.