ಮಡಿಕೇರಿ, ಮಾ. ೯: ಗಿರಿಜನ ಕಾಫಿ ಬೆಳೆಗಾರರು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದು ಸ್ವಾವಲಂಬಿಗಳಾಗಿ ಬದುಕುವಂತೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗುರುಶಾಂತಪ್ಪ ಹೇಳಿದರು.
ಕಾಫಿ ಮಂಡಳಿ ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪ ಕಾಫಿ ಮಂಡಳಿ ಹಿರಿಯ ವಿಸ್ತರಣಾ ವಿಭಾಗದ ಸಭಾಂಗಣದಲ್ಲಿ ೨೦ ಗಿರಿಜನ ಕಾಫಿ ಬೆಳೆಗಾರರಿಗೆ ಕಾಫಿ ಕೊಯ್ಲು ಮ್ಯಾಟ್ ವಿತರಿಸಿ ಅವರು ಮಾತನಾಡಿದರು.
ಗಿರಿಜನರು ಕಾಫಿ ಬೆಳೆಯನ್ನು ಉತ್ತಮ ಗುಣಮಟ್ಟದಲ್ಲಿ ಬೆಳೆದು ಅದರಿಂದ ಅಧಿಕ ಲಾಭ ಪಡೆದು ಎಲ್ಲರಂತೆ ಉತ್ತಮ ಜೀವನದೊಂದಿಗೆ ಸ್ವಾವಲಂಬಿಗಳಾಗಿ ಅಭಿವೃದ್ಧಿ ಹೊಂದಬೇಕು ಎಂದು ಅವರು ಸಲಹೆಯಿತ್ತರು.
ಕಾಫಿ ಮಂಡಳಿಯ ಉಪ ನಿರ್ದೇಶಕರಾದ (ಉಸ್ತುವಾರಿ) ಡಾಕ್ಟರ್ ಶ್ರೀದೇವಿ ಮಾತನಾಡಿ, ಬುಡಕಟ್ಟು ಕಾಫಿ ಮತ್ತು ಕರಿಮೆಣಸು ಸಮಗ್ರ ಅಭಿವೃದ್ಧಿ ಕಾರ್ಯಕ್ರಮದ ಯೋಜನೆ ಮೂಲಕ ಕಾಫಿ ಬೆಳೆಗಾರರಿಗೆ ಕಾಫಿ ಪಿಕ್ಕಿಂಗ್ ಮ್ಯಾಟ್ ವಿತರಿಸಲಾಗಿದೆ, ಮುಂದಿನ ದಿನಗಳಲ್ಲಿ ಗಿರಿಜನ ಕಾಫಿ ಬೆಳೆಗಾರರ ಮಣ್ಣು ಪರೀಕ್ಷೆ ಮಾಡಿಸಿ ಸುಣ್ಣವನ್ನು ವಿತರಿಸಲಾಗುವುದು, ಈ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ನಾಲ್ಕೇರಿ ಬುಡಕಟ್ಟು ಕಾಫಿ ಉತ್ಪಾದಕರ ಸಂಘದ ಅಧ್ಯಕ್ಷ ಪ್ರಕಾಶ್, ತಿತಿಮತಿ ಬಿರ್ಸಮುಂಡ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಪಾಪು, ಮಾಲ್ದಾರೆ ಆದಿವಾಸಿ ಕಾಫಿ ಮತ್ತು ಕರಿಮೆಣಸು ಬೆಳೆಗಾರರ ಸಂಘದ ಅಧ್ಯಕ್ಷÀ ಒ. ಕಾಳ, ಕಾಫಿ ಮಂಡಳಿ ಅಧಿಕಾರಿ ಮಿಥುನ್, ತಾಂತ್ರಿಕ ಸಹಾಯಕರಾದ ಮಧು, ಯೋಜನ ಸಹಾಯಕರಾದ ಮುತ್ತಪ್ಪ, ನಿತಿನ್, ಜವಿನ್ ಇದ್ದರು.