ಕುಶಾಲನಗರ, ಮಾ. ೮: ಪ್ರತಿ ಮನೆಯಲ್ಲಿ ದಿನನಿತ್ಯ ಬಳಕೆಯಾಗಿ ಉಳಿಯುವ ಹಸಿ ಕಸವನ್ನು ಮನೆಯಲ್ಲಿ ಗೊಬ್ಬರ ಮಾಡಿ ಹೂಗಿಡಗಳು ತರಕಾರಿಗಳಿಗೆ ಬಳಸುವ ವಿನೂತನ ಯೋಜನೆಯೊಂದನ್ನು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಲೋಕಾರ್ಪಣೆಗೊಳಿಸಿದರು.

ಕುಶಾಲನಗರ ಅಳಿಲು ಸೇವೆ ವತಿಯಿಂದ ‘ನಮ್ಮ ಕಸ ನಮ್ಮಲ್ಲೇ ಗೊಬ್ಬರ’ ಯೋಜನೆಗೆ ಚಾಲನೆ ನೀಡಲಾಯಿತು. ಪಟ್ಟಣ ಪಂಚಾಯಿತಿ ಸಹಕಾರದೊಂದಿಗೆ ಪ್ರತಿ ಮನೆಗಳಿಗೆ ಈ ಯೋಜನೆಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ತಿಳಿಸಿದ್ದಾರೆ.

ಮನೆಯಲ್ಲಿ ದಿನ ಬಳಕೆಯಾಗಿ ಉಳಿಯುವ ತ್ಯಾಜ್ಯ ಹಸಿ ಕಸವನ್ನು ಗೊಬ್ಬರವಾಗಿಸಲು ಪೈಪ್‌ಗಳನ್ನು ಅಳವಡಿಸಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಈ ಮೂಲಕ ಕಸದ ಸಂಗ್ರಹ, ಅದರಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ದೊರೆತಂತಾಗಿದೆ. ಪ್ರಾರಂಭದಲ್ಲಿ ಸುಮಾರು ೫೦ ಮನೆಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಅಳಿಲು ಸೇವಾ ಟ್ರಸ್ಟ್ ನ ಅಧ್ಯಕ್ಷ ಶಿವಾಜಿ ತಿಳಿಸಿದ್ದಾರೆ.

ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈವರ್ಧನ್, ಉಪಾಧ್ಯಕ್ಷೆ ಸುರಯ್ಯಭಾನು, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಅಳಿಲು ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಜನಿಕಾಂತ್ ಉಪಾಧ್ಯಕ್ಷರಾದ ದಿನೇಶ್ ಖಜಾಂಚಿ ಸಂಗೀತ, ನಿರ್ದೇಶಕರಾದ ಕೆ.ಜಿ ಮನು, ಚಂದ್ರಶೇಖರ್, ವೇದಾವತಿ ಪುಷ್ಪನಾಗೇಶ್, ಡಾಟಿ, ಅನಿತಾ, ಸುಮನ್, ಗಿರೀಶ್ ಮತ್ತಿತರರಿದ್ದರು.