ಮಾ. ೮: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಸೋಮವಾರಪೇಟೆ ಮತ್ತು ಹಂಡ್ಲಿ ಗ್ರಾಮ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಸಮೀಪದ ನಾಕಲಗೋಡು ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ವಿಸ್ತರಣಾ ಘಟಕ ಬಲಪಡಿಸುವಿಕೆ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಪಶು ಆರೋಗ್ಯ ಮತ್ತು ಶ್ವಾನಗಳಿಗೆ ರೇಬಿಸ್ ಚುಚ್ಚುಮದ್ದು ನೀಡುವ ಶಿಬಿರವು ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ ಬರಡು ರಾಸುಗಳಿಗೆ ಚಿಕಿತ್ಸೆ, ರಾಸುಗಳ ಸ್ಥೂಲ ಗರ್ಭ ಪರೀಕ್ಷೆ, ಗರ್ಭಧಾರಣೆ ಪರೀಕ್ಷೆ, ರಾಸುಗಳಿಗೆ ಮತ್ತು ಶ್ವಾನಗಳಿಗೆ ಜಂತುನಾಶಕ ಔಷಧೋಪಚಾರ, ಎಮ್ಮೆ- ಹಸುಗಳು ಗರ್ಭಧಾರಣೆ ಆಗದಿರುವ ಬಗ್ಗೆ ಪರೀಕ್ಷೆ ನಡೆಸಿ ಕೃತಕ ಗರ್ಭಧಾರಣೆಗೆ ಚಿಕಿತ್ಸೆ ನೀಡಲಾಯಿತು.

ಶಿಬಿರದಲ್ಲಿ ಜಾನುವಾರುಗಳ ಸಮಸ್ಯೆ ಬಗ್ಗೆ ಆರೋಗ್ಯ ತಪಾಸಣೆಯನ್ನು ವೈದ್ಯರ ತಂಡ ಉಚಿತವಾಗಿ ನಡೆಸಿತು. ಶ್ವಾನಗಳಿಗೆ ಉಚಿತ ರೇಬಿಸ್ ಲಸಿಕೆ ನೀಡಲಾಯಿತು.

ಮಿಶ್ರತಳಿ ಹಸು ಮತ್ತು ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಇಲಾಖೆ ವತಿಯಿಂದ ರಾಸುಗಳ ಮಾಲೀಕರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ಪಶು ವೈದ್ಯಕೀಯ ಇಲಾಖೆಯ ವಿವಿಧ ಪಶು ವೈದ್ಯ ತಜ್ಞರು ರಾಸುಗಳಿಗೆ ಚಿಕಿತ್ಸೆ ನೀಡಿ ರೈತರಿಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ತಜ್ಞರಾದ ಡಾ.ಎಂ,ಬಾಬು, ಡಾ.ಎಸ್.ವಿ. ಬಾದಾಮಿ, ಡಾ.ಬಿ. ಎಂ. ಸತೀಶ್‌ಕುಮಾರ್ ಇವರುಗಳ ನೇತೃತ್ವದಲ್ಲಿ ರಾಸು ಮತ್ತು ಶ್ವಾನಗಳಿಗೆ ಚಿಕಿತ್ಸೆ ನೀಡಲಾಯಿತು. ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಸುರೇಶ್ ಭಟ್, ಹಂಡ್ಲಿ ಗ್ರಾ.ಪಂ.ಅಧ್ಯಕ್ಷೆ ಮಹಾದೇವಮ್ಮ, ಗ್ರಾ.ಪಂ.ಸದಸ್ಯರು ಹಾಜರಿದ್ದರು.