ಮಡಿಕೇರಿ, ಮಾ. ೮: ಇಲ್ಲಿನ ರೇಸ್‌ಕೋರ್ಸ್ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಆಟೋ ರಿಕ್ಷಾವೊಂದು ಮತ್ತೊಂದು ಆಟೋ ರಿಕ್ಷಾ ಹಾಗೂ ಮಾರುತಿ ವ್ಯಾನ್‌ಗೆ ಡಿಕ್ಕಿಯಾಗಿ ಪಲ್ಟಿ ಹೊಡೆದ ಘಟನೆ ಸಂಭವಿಸಿದೆ.
ನೂತನ ಖಾಸಗಿ ಬಸ್ ನಿಲ್ದಾಣದ ಕಡೆಯಿಂದ ಆಗಮಿಸಿದ ಆಟೋ ರಿಕ್ಷಾ (ಕೆಎ-೧೩ ಬಿ-೨೨೬೧) ನಿಯಂತ್ರಣ ಕಳೆದುಕೊಂಡು ಬಲಬದಿಗೆ ತಿರುಗಿ ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾಗೆ (ಕೆಎ-೧೨ ಬಿ-೩೮೯೪) ಡಿಕ್ಕಿಯಾಗಿದೆ. ಇದೇ ಸಂದರ್ಭ ರಸ್ತೆ ಬದಿ ನಿಲ್ಲಿಸಿದ್ದ ಮಾರುತಿ ವ್ಯಾನ್‌ನ ನಡುವೆ ಸಿಲುಕಿಕೊಂಡು ಪಲ್ಟಿಯಾಗಿದೆ. ಆಟೋ ಚಾಲಕ ಶರವಣ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮತ್ತೋರ್ವ ಆಟೋ ಚಾಲಕ ಪುಟ್ಟೇಗೌಡ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಸಂಚಾರಿ ಪೊಲೀಸರು ಶರವಣ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವಘಡದಲ್ಲಿ ಮಾರುತಿ ವ್ಯಾನ್‌ಗೂ ಜಖಂ ಉಂಟಾಗಿದೆಯಾದರೂ, ಅವರಿಂದ ಯಾವುದೇ ದೂರು ದಾಖಲಾಗಿಲ್ಲ. - ಟಿ.ಜಿ. ಸತೀಶ್.