ಶ್ರೀಮಂಗಲ, ಮಾ. ೮ : ಕೊಡವ ಜನಾಂಗದ ಅಭಿವೃದ್ಧಿಗಾಗಿ ಬಜೆಟಿನಲ್ಲಿ ಅನುದಾನ ಘೋಷಣೆ ಮಾಡಿರುವುದು ನಮ್ಮ ಬೇಡಿಕೆಗೆ ಸಿಕ್ಕ ಮೊದಲ ಯಶಸ್ಸು ಎಂದಿರುವ ಯುನೈಟೆಡ್ ಕೊಡವ ಆರ್ಗನೈಸೇಷನ್ ಟ್ರಸ್ಟ್ನ (ಯುಕೊ) ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಕೂಡಲೇ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಂಗಳವಾರ ಪೊನ್ನಂಪೇಟೆ ಯಲ್ಲಿ ನಡೆದ ಚಿಂತನ ಸಭೆಯ ನಂತರ ಮಾತನಾಡಿದ ಅವರು, ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಯಾಗ ಬೇಕೆಂಬುವುದು ನಮ್ಮ ಅಚಲ ಬೇಡಿಕೆಯಾಗಿದೆ. ಕೊಡಗಿನ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್‌ರವರ ಮೂಲಕ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಬೃಹತ್ ನಿಯೋಗದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಖುದ್ದಾಗಿ ಭೆಟಿ ಮಾಡಿ ಬೇಡಿಕೆಯ ಕುರಿತು ಮನವರಿಕೆ ಮಾಡಲಾಗಿತ್ತು.

ಪ್ರತ್ಯೇಕವಾಗಿ ಸಂಸದ ಪ್ರತಾಪ್ ಸಿಂಹನವರೂ ಸಹ ಖುದ್ದಾಗಿ ಮುಖ್ಯಮಂತ್ರಿಗಳನ್ನು ಕಂಡು ಈ ಕುರಿತು ಮನವಿ ಮಾಡಿದ್ದರು. ನಮ್ಮ ಶಾಸಕರೂ ಹಲವು ಬಾರಿ ಪತ್ರದ ಮೂಲಕ ಕೊಡವ ಅಭಿವೃದ್ಧಿ ನಿಗಮಕ್ಕಾಗಿ ಮನವಿ ಮಾಡಿಕೊಂಡಿದ್ದರು. ನಂತರದಲ್ಲಿ ಯುಕೊ ಪ್ರಮುಖರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರವರನ್ನು ಭೇಟಿ ಮಾಡಿ ಅವರ ಮುಖಾಂತರವೂ ಮುಖ್ಯಮಂತ್ರಿಗಳಿಗೆ ಒತ್ತಡ ಹೇರುವ ತಂತ್ರವನ್ನು ಮಾಡಲಾಗಿತ್ತು. ಇದೆಲ್ಲದರ ಫಲವಾಗಿ ಇದೀಗ ಮುಖ್ಯಮಂತ್ರಿಗಳು ೧೦ಕೋಟಿ ಅನುದಾನವನ್ನು ಪ್ರಸಕ್ತ ಬಜೆಟ್‌ನಲ್ಲಿ ಕೊಡವ ಜನಾಂಗದ ಅಭಿವೃದ್ಧಿಗಾಗಿ ನೀಡಿದ್ದಾರೆ ಎಂದರು.

ಈ ಸಂದರ್ಭ ವಕೀಲ ನೆಲ್ಲಮಕ್ಕಡ ಜೆಫ್ರಿ ಮಾದಯ್ಯ, ಅಪ್ಪರಂಡ ವೇಣು ಪೊನ್ನಪ್ಪ, ಮಾದೇಟಿರ ತಿಮ್ಮಯ್ಯ ಹಾಜರಿದ್ದರು.