ಮಡಿಕೇರಿ, ಮಾ. ೮: ಅಲ್ಪ ಸಂಖ್ಯಾತ ಸಮುದಾಯ ಶಾಂತಿ ಹಾಗೂ ಸಾಮರಸ್ಯದ ಬದುಕಿಗೆ ಒತ್ತು ನೀಡಬೇಕು ಎಂದು ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಮನವಿ ಮಾಡಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಕಾನೂನು ಸುವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಲವಾರು ಸಲಹೆ - ಸೂಚನೆಗಳನ್ನು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೊಡಗು ಜಿಲ್ಲೆ ಶಾಂತಿ - ಸಹಬಾಳ್ವೆಗೆ ಹೆಸರುವಾಸಿಯಾದ ಜಿಲ್ಲೆ. ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕಿದರೆ

(ಮೊದಲ ಪುಟದಿಂದ) ಮಾತ್ರ ಜಿಲ್ಲೆಯ ಅಭಿವೃದ್ಧಿ ಸಾಧ್ಯ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯ ಭಾವನಾತ್ಮಕ ತೀರ್ಮಾನಗಳನ್ನು ಕೈಗೊಂಡು ದುಡುಕಬಾರದು ಎಂದು ಅಬ್ದುಲ್ ಅಜೀಮ್ ಮನವಿ ಮಾಡಿದರು. ಇತ್ತೀಚೆಗೆ ಹುತಾತ್ಮರಾದ ಯೋಧ ಅಲ್ತಾಫ್ ಅವರ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿಯೂ ಅವರು ಭರವಸೆಯಿತ್ತರು. ಅಬ್ದುಲ್ ಅಜೀಮ್ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಜಿಲ್ಲೆಯ ೫೪ ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನ ಭೂಮಿ ಒದಗಿಸಲು ಬಾಕಿ ಇದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುAಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ಅಲ್ಪಸಂಖ್ಯಾತರ ಆಯೋಗದ ರಾಜ್ಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಆರ್.ನಿಸಾರ್ ಅಹಮದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಆರ್.ವೆಂಕಟೇಶ್, ತಹಶೀಲ್ದಾರ್‌ರಾದ ಮಹೇಶ್, ಗೋವಿಂದ ರಾಜು, ಯೋಗಾನಂದ, ಪ್ರಕಾಶ್, ಪ್ರಶಾಂತ್, ಡಿವೈಎಸ್‌ಪಿಗಳಾದ ಗಜೇಂದ್ರ ಪ್ರಸಾದ್, ಶೈಲೇಂದ್ರ ಕುಮಾರ್, ಜಯರಾಮ್, ಅಲ್ಪಸಂಖ್ಯಾತರ ಅಧಿಕಾರಿ ಮಮತ, ಅಲ್ಪಸಂಖ್ಯಾತರ ನಿಗಮದ ವ್ಯವಸ್ಥಾಪಕರಾದ ನಾಗೇಂದ್ರ ಇತರರು ಇದ್ದರು.

ಸಮಾಲೋಚನೆ: ನಗರದ ಸುದರ್ಶನ ಅತಿಥಿ ಗೃಹದಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಜೈನ್ ಸಮುದಾಯದ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು.

ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ಹಲವು ಯೋಜನೆಗಳಿದ್ದು, ಇವುಗಳನ್ನು ಪಡೆದುಕೊಳ್ಳಬೇಕು. ಎಲ್ಲರನ್ನೂ ಗೌರವದಿಂದ ಕಾಣಬೇಕು ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಕೆ.ಟಿ.ಬೇಬಿ ಮ್ಯಾಥ್ಯೂ ಅವರು ವೀರಾಜಪೇಟೆಯ ರಾಯ್ ಡಿಸೋಜ ಅವರು ದೌರ್ಜನ್ಯದಿಂದ ಮೃತಪಟ್ಟಿದ್ದು, ಸಿಐಡಿ ತನಿಖೆಗೆ ವಹಿಸಿ ಒಂಬತ್ತು ತಿಂಗಳಾದರೂ, ಇದುವರೆಗೆ ನ್ಯಾಯ ಸಿಕ್ಕಿಲ್ಲ. ರಾಯ್ ಡಿಸೋಜ ಕುಟುಂಬಕ್ಕೆ ಒಂದು ಪೈಸೆಯೂ ಪರಿಹಾರ ಸಿಕ್ಕಿಲ್ಲ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಗಮನಕ್ಕೆ ತಂದರು.

ಜೋಕಿಮ್ ರಾಡಿಗಸ್ ಮಾತನಾಡಿ, ರಾಯ್ ಡಿಸೋಜ ಪ್ರಕರಣ ಸಂಬAಧ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದಾರೆ ಎಂದು ತಿಳಿಸಿದರು. ಪ್ರಮುಖರಾದ ಖಾಲಿಲ್ ಅವರು ಎಮ್ಮೆಮಾಡು ಸೇರಿದಂತೆ ಅಲ್ಪಸಂಖ್ಯಾತರು ಹೆಚ್ಚು ವಾಸ ಮಾಡುವ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಶಿಕ್ಷಕರನ್ನು ನಿಯೋಜಿಸಬೇಕು ಎಂದು ಮನವಿ ಮಾಡಿದರು. ನಗರಸಭೆ ಸದಸ್ಯರಾದ ಮನ್ಸೂರ್ ಮಾತನಾಡಿ, ಅಲ್ಪಸಂಖ್ಯಾತರಿಗಾಗಿ ಸರ್ಕಾರದಿಂದ ಸಾಕಷ್ಟು ಸವಲತ್ತುಗಳು ಇವೆ. ಆದರೆ ಸಮರ್ಪಕವಾಗಿ ತಲುಪಬೇಕು. ಪೊಲೀಸ್ ಠಾಣೆಗಳಲ್ಲಿ ಅಲ್ಪಸಂಖ್ಯಾತರ ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ದೂರಿದರು.

ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷರಾದ ಹಕೀಂ ಮಾತನಾಡಿ, ಹುತಾತ್ಮ ಯೋಧ ಅಲ್ತಾಫ್ ಅಹ್ಮದ್ ಅವರ ಕುಟುಂಬಕ್ಕೆ ೧೦ ಲಕ್ಷ ರೂ. ಪರಿಹಾರ ಒದಗಿಸಬೇಕು. ಮಕ್ಕಳನ್ನು ಸೈನಿಕ ಶಾಲೆಗೆ ಸೇರಿಸಲು ಅವಕಾಶ ಮಾಡಬೇಕು. ಉಚಿತ ಶಿಕ್ಷಣ ಕೊಡಿಸಬೇಕು. ವೀರಾಜಪೇಟೆಯ ಪಟ್ಟಣದ ಯಾವುದಾದರೂ ರಸ್ತೆಗೆ ಹುತಾತ್ಮ ಅಲ್ತಾಫ್ ಅಹ್ಮದ್ ಅವರ ಹೆಸರಿಡಬೇಕು ಎಂದು ಮನವಿ ಮಾಡಿದರು.

ಅಲ್ತಾಫ್ ಕುಟುಂಬಕ್ಕೆ ಸಾಂತ್ವನ

ಹಿಮಪಾತಕ್ಕೆ ಸಿಲುಕಿ ಹುತಾತ್ಮರಾದ ವೀರಾಜಪೇಟೆಯ ಯೋಧ ಅಲ್ತಾಫ್ ಅಹಮ್ಮದ್ ಅವರ ಪತ್ನಿ ಹಾಗೂ ತಾಯಿಯನ್ನು ಭೇಟಿ ಮಾಡಿದ ಅಬ್ದುಲ್ ಅಜೀಮ್ ಅವರು ಸಾಂತ್ವನ ಹೇಳಿದರು.

ಎಡಪಾಲಕ್ಕೆ ತೆರಳಿ ಅಲ್ತಾಫ್ ಪತ್ನಿ ಝುಬೇರಿಯಾ, ತಾಯಿ ಹಾಗೂ ಮಕ್ಕಳನ್ನು ಭೇಟಿ ಮಾಡಿ ಮಕ್ಕಳ ವಿದ್ಯಾಭ್ಯಾಸ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಅವರು, ಅಲ್ತಾಫ್ ಪತ್ನಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಉತ್ತೀರ್ಣರಾಗುವಂತೆ ಸಲಹೆ ನೀಡಿದ ಅವರು, ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಇದರಿಂದ ಅನುಕೂಲವಾಗಲಿದೆ ಎಂದರು ಹಾಗೂ ಮಕ್ಕಳು ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲು ಇಚ್ಚಿಸಿರುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಅವಕಾಶ ಕಲ್ಪಿಸಲು ಪ್ರಯತ್ನಿಸುವುದಾಗಿ ಭರವಸೆಯಿತ್ತರು. ಅಲ್ತಾಫ್ ಕುಟುಂಬಕ್ಕೆ ಸೂರು ಒದಗಿಸಲು ಗೃಹ ನಿರ್ಮಾಣ ಮಂಡಳಿ ವತಿಯಿಂದ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚಿಸುತ್ತೇನೆ ಎಂದು ಆಶ್ವಾಸನೆ ನೀಡಿದರು. ಅಲ್ತಾಫ್ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದು, ಅವರ ಕುಟುಂಬಕ್ಕೆ ಸಕಲ ನೆರವು ಕಲ್ಪಿಸಲು ಶ್ರಮಿಸುವುದಾಗಿ ಹೇಳಿದರು.

ಭೇಟಿಯ ವೇಳೆ ತಹಶೀಲ್ದಾರ್ ಯೋಗಾನಂದ, ಬಿಜೆಪಿ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥ ಜೋಕಿಂ ರೋಡ್ರಿಗ್ರಸ್, ಎಜಾಜ್ ಅಹಮ್ಮದ್, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಘಟಕದ ಪ್ರಮುಖರು, ಅಲ್ತಾಫ್ ಕುಟುಂಬದವರು, ಎಡಪಾಲ ಗ್ರಾಮಸ್ಥರು ಹಾಜರಿದ್ದರು.