ಗೋಣಿಕೊಪ್ಪ ವರದಿ, ಮಾ. ೭: ವ್ಯಾಪಾರಿಗಳಿಂದ ತೂಕದಲ್ಲಿ ಮೋಸ ನಡೆಯುತ್ತಿದೆ ಎಂಬ ಆರೋಪ ಇರುವುದರಿಂದ ಜಿಲ್ಲಾಡಳಿತ ತೂಕ ಮತ್ತು ಅಳತೆ ಬಗ್ಗೆ ವ್ಯಾಪಾರ ಮಳಿಗೆಗಳಲ್ಲಿ ಪರಿಶೀಲನೆ ನಡೆಸಲು ಒತ್ತಾಯಿಸುವ ನಿರ್ಣಯವನ್ನು ಸಾರ್ವಜನಿಕ ಹಿತ ರಕ್ಷಣಾ ಸಮಿತಿ ಆಡಳಿತ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಸಿಲ್ವರ್ಸ್ಕೆöÊ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ, ಬೆಳೆ ಖರೀದಿಸುವ ಒಂದಷ್ಟು ವ್ಯಾಪಾರಿಗಳು ತೂಕದಲ್ಲಿ ಮೋಸ ಮಾಡುತ್ತಿರುವುದರಿಂದ ಕೃಷಿಕರಿಗೆ ಅನ್ಯಾಯ ಆಗುತ್ತಿರುವ ಬಗ್ಗೆ ಸಾಕಷ್ಟು ಆರೋಪಗಳಿವೆ. ಸಾಕಷ್ಟು ದೂರು ಕೂಡ ಸಮಿತಿಗೆ ಬಂದಿರುವುದರಿAದ ಈ ಬಗ್ಗೆ ಎಚ್ಚೆತ್ತುಕೊಂಡು ತೂಕ ಮತ್ತು ಅಳತೆ ಮಾಪನ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಅಂತಹ ವ್ಯಾಪಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಲಾಯಿತು.
ಜಿಲ್ಲಾ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯಲ್ಲಿ ಖಾಲಿ ಇರುವ ಸುಮಾರು ೨೧೪ ಹುದ್ದೆಗೆ ಸಿಬ್ಬಂದಿ ನೇಮಿಸುವಂತೆ ಒತ್ತಾಯಿಸಿ ಪಶು ಸಂಗೋಪನಾ ಇಲಾಖೆ ಸಚಿವರು, ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು. ಸಿಬ್ಬಂದಿ ಕೊರತೆಯಿಂದ ರೈತರಿಗೆ ಆಗುತ್ತಿರುವ ತೊಂದರೆ, ಜಾನುವಾರು ಗಳಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡಲು ಒತ್ತಾಯಿಸಲು ನಿರ್ಧರಿಸ ಲಾಯಿತು.
ಹುಲಿ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿಲ್ಲ. ಅರಣ್ಯ ಸಚಿವರಿಗೆ ಪತ್ರ ಬರೆದು ವೈಜ್ಞಾನಿಕ ರೀತಿಯಲ್ಲಿ ಕ್ರಮಕೈಗೊಳ್ಳಲು ಆಗ್ರಹಿಸಲು ನಿರ್ಣಯ ತೆಗೆದುಕೊಳ್ಳಲಾಯಿತು. ಸಭೆಯಲ್ಲಿ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ, ಕಾರ್ಯಾಧ್ಯಕ್ಷ ಬಿ. ಎಸ್. ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ಸತೀಶ್ ದೇವಯ್ಯ, ಸಲಹೆಗಾರ ಸಿ. ಎನ್. ವಿಶ್ವನಾಥ್, ಸಂಘಟನಾ ಕಾರ್ಯದರ್ಶಿ ಕಾಳಿಮಾಡ ಕೆ. ಬೆಳ್ಯಪ್ಪ, ಸಹ ಕಾರ್ಯದರ್ಶಿ ರಾಜಾ ನರೇಂದ್ರ, ಖಜಾಂಚಿ ಎ. ಎನ್ ಮಾದಯ್ಯ ಇತರರು ಇದ್ದರು.