ಸುಂಟಿಕೊಪ್ಪ, ಮಾ. ೭: ಇಲ್ಲಿಗೆ ಸಮೀಪದ ಕುಶಾಲನಗರದ ಕಾಳೇಘಾಟ್ ಬಾರೊಂದರ ಸಮೀಪದಲ್ಲಿ ಕಳೆದ ೪ ತಿಂಗಳಿAದ ಅನಾಥವಾಗಿದ್ದ ವೃದ್ಧ ನಿಂಗಪ್ಪ (೬೩) ಎಂಬಾತನನ್ನು ವಿಕಾಸ್ ಜನಸೇವಾ ಟ್ರಸ್ಟ್ ಜೀವನದಾರಿ ಅನಾಥ ಆಶ್ರಮಕ್ಕೆ ಸೇರಿಸಲಾಯಿತು. ರಸ್ತೆ ಬದಿಯಲ್ಲ್ಲಿ ಅನಾಥವಾಗಿ ದಿನ ದೂಡುತ್ತಿದ್ದುದನ್ನು ಕಂಡ ಕುಶಾಲನಗರದ ಸಮಾಜ ಸೇವಕರು ಸುಂಟಿಕೊಪ್ಪ ಸಮೀಪದ ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ತೊಂಡೂರು ಗ್ರಾಮದಲ್ಲಿರುವ ಅನಾಥ ಆಶ್ರಮಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸಮಾಜ ಸೇವಕರು ವಿಕಾಸ್ ಜನಸೇವಾ ಟ್ರಸ್ಟ್ ಜೀವನದಾರಿ ಅನಾಥ ಆಶ್ರಮದ ಅಧ್ಯಕ್ಷ ಹೆಚ್.ಕೆ. ರಮೇಶ್ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದು, ಕೂಡಲೆ ಕಾರ್ಯಪ್ರವೃತ್ತರಾದ ರಮೇಶ ಅವರು ಪೊಲೀಸರಿಗೆ ಮಾಹಿತಿ ನೀಡಿ ವೃದ್ಧನನ್ನು ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಆತನನ್ನು ಶುಭ್ರಗೊಳಿಸಿ ನಂತರ ಆಶ್ರಮದಲ್ಲಿ ಆಶ್ರಯ ನೀಡುವ ಮೂಲಕ ಅನಾಥನಿಗೆ ದಾರಿ ದೀಪವಾಗಿದ್ದಾರೆ. ಈ ವೃದ್ಧ ಬೆಳಗಾವಿ ಜಿಲ್ಲೆಯವನಾಗಿದ್ದು, ಯಾರೂ ಇಲ್ಲದೆ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದು, ಕುಶಾಲನಗರದಲ್ಲಿ ನಿತ್ರಾಣವಾಗಿ ಮಲಗಿದ್ದು, ಸಮಾಜ ಸೇವಕರಾದ ಶೀಲಾ ಹಾಗೂ ತೊಂಡೂರು ಗ್ರಾಮ ಪಂಚಾಯಿತಿ ಸದಸ್ಯೆ ಸೌಮ್ಯ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯೆ ಫಿಲೋಮಿನ ಜಾರ್ಜ್ ಆಶ್ರಮಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.