ಕೂಡಿಗೆ, ಮಾ. ೮: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಗೆ ಶನಿವಾರ ಭೇಟಿ ನೀಡಿದ್ದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಕಲಿಕೆ ಮತ್ತು ಫಲಿತಾಂಶ ಕುರಿತು ಸಂವಾದ ನಡೆಸಿದರು.
ವಿದ್ಯಾರ್ಥಿಗಳು ನಿರಂತರವಾಗಿ ಶಾಲೆಗೆ ಆಗಮಿಸಿ ಶಿಕ್ಷಕರು ಹೇಳಿಕೊಡುವ ಪಾಠ ಪ್ರವಚನಗಳನ್ನು ಚೆನ್ನಾಗಿ ಅಭ್ಯಾಸ ಮಾಡಬೇಕು. ಮಕ್ಕಳು ಸಮಯವನ್ನು ವ್ಯರ್ಥ ಮಾಡದೇ ಶಿಸ್ತು, ಸಂಯಮಗಳನ್ನು ರೂಢಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ರಂಜನ್ ಹೇಳಿದರು.
ಕಟ್ಟಡ ನಿರ್ಮಾಣಕ್ಕೆ ಆದ್ಯತೆ : ಶಾಲೆಯ ಈಗಿನ ಹಳೆ ಕಟ್ಟಡ ಹಾಗೂ ನೂತನವಾಗಿ ನಿರ್ಮಿಸುತ್ತಿರುವ ಎರಡು ತರಗತಿ ಕೊಠಡಿಗಳ ಕಾಮಗಾರಿ ಪರಿಶೀಲಿಸಿದ ಶಾಸಕರು, ಕಳಪೆ ಕಾಮಗಾರಿ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಶಾಲೆಗೆ ಅಗತ್ಯವಾಗಿ ಬೇಕಾದ ಕೊಠಡಿಗಳ ನಿರ್ಮಾಣ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಸೌಲಭ್ಯ ಒದಗಿಸಲು ಅನುದಾನ ಒದಗಿಸುವುದಾಗಿ ಶಾಸಕ ರಂಜನ್ ತಿಳಿಸಿದರು.
ಶಾಲೆಗೆ ಅಗತ್ಯವಾದ ಕೊಠಡಿಗಳ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಿ ಕೊಡಬೇಕು ಎಂದು ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್ ಮನವಿ ಮಾಡಿದರು.
ಶಾಲೆಯ ಶೈಕ್ಷಣಿಕ ಚಟುವಟಿಕೆಗಳ ಕುರಿತು ಶಾಸಕರು ಮಾಹಿತಿ ಪಡೆದರು. ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಸದಸ್ಯ ಕೆ.ಕೆ.ಭೋಗಪ್ಪ, ಕೂಡಿಗೆ ಸರ್ಕಾರಿ ಪಿಯು ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ಶಿಕ್ಷಕರು ಇದ್ದರು.